ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಕಾವು ಒಂದೆಡೆ ಏರುತ್ತಿದ್ದರೆ ಮತ್ತೊಂದೆಡೆ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದೆ.
ರಾಜಕೀಯ ನಾಯಕರ ದೊಡ್ಡ ದಂಡೇ ಇಲ್ಲಿ ನೆರೆಯುತ್ತಿದ್ದು, ಅವರ ಹಿಂಬಾಲಕರು, ಕಾರ್ಯಕರ್ತರು ಹೀಗೆ ಚುನಾವಣಾ ಪ್ರಚಾರಕ್ಕೆ ಸಾವಿರಾರು ಮಂದಿ ಆಗಮಿಸುತ್ತಿರುವುದರಿಂದ ಎಲ್ಲೆಡೆ, ಜ್ಯೂಸ್, ಮಜ್ಜಿಗೆ, ಎಳನೀರಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನು ಮತಕೇಳಲು ಆಗಮಿಸುವ ನಾಯಕರೆಲ್ಲರೂ ಬಾಟಲಿ ನೀರುಗಳನ್ನು ತಮ್ಮೊಂದಿಗೆ ಕೊಂಡೊಯ್ದು ಅದನ್ನೇ ಕುಡಿಯುತ್ತಾ ದಾಹ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಹಲವು ಗ್ರಾಮಗಳಲ್ಲಿ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕ ನಲ್ಲಿಗಳು, ಬೋರ್ವೆಲ್, ಟ್ಯಾಂಕರ್ ಗಳ ಮುಂದೆ ಖಾಲಿ ಕೊಡಗಳನ್ನಿಡಿದು ನಿಲ್ಲುತ್ತಿರುವ ಮಹಿಳೆಯರ, ಮಕ್ಕಳ ಸಾಲು ಹೆಚ್ಚಾಗುತ್ತಿದೆ. ಕೇವಲ ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಲಜ್ಜೆಗೆಟ್ಟ ನಾಯಕರು ಅಂಥ ಸ್ಥಳಕ್ಕೆ ಹೋಗಿ ಅವರ ಮುಂದೆ ಮತಯಾಚನೆ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಜನ ಅಳಲು ತೋಡಿಕೊಳ್ಳುತ್ತಿದ್ದರೂ ಅವರ ಮೇಲೆ, ಇವರ ಮೇಲೆ ಎಂಬಂತೆ ಆರೋಪ ಪ್ರತ್ಯಾರೋಪ ಮಾಡುತ್ತಾ ಅಲ್ಲೂ ರಾಜಕೀಯ ಮಾಡಿ ಮತಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕ್ಷೇತ್ರ ಪ್ರಭಾವಿ ನಾಯಕ ಹೆಚ್.ಎಸ್.ಮಹದೇವಪ್ರಸಾದ್ ಅವರ ಕ್ಷೇತ್ರವಾಗಿದ್ದು, ಹಲವು ವರ್ಷಗಳಿಂದ ಅವರ ಹಿಡಿತದಲ್ಲೇ ಇತ್ತಾದರೂ ಇಲ್ಲಿ ಅಭಿವೃದ್ಧಿ ಕೆಲಸ ನಡೆದಿದ್ದು ಅಷ್ಟರಲ್ಲೇ ಇದೆ. ಇದೀಗ ಬೇಸಿಗೆಯಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಬಡವರು ಬೇಸಿಗೆ ಬಂತೆಂದರೆ ಹನಿ ನೀರಿಗಾಗಿ ಎಷ್ಟೊಂದು ಪರಿಪಾಟಲು ಪಡಬೇಕು ಎಂಬುದು ಮತ ಕೇಳಲು ಹೋಗುತ್ತಿರುವ ರಾಜಕೀಯ ನಾಯಕರಿಗೆ ಗೊತ್ತಾಗುತ್ತಿದೆ.
ಪ್ರತಿಪಕ್ಷದ ನಾಯಕರಿಗೆ ಈ ನೀರಿನ ಸಮಸ್ಯೆ ಒಂದು ವರದಾನವಾಗಿದ್ದು ಅದನ್ನಿಟ್ಟುಕೊಂಡು ಆಡಳಿತ ಪಕ್ಷದ ಮೇಲೆ ಪ್ರಹಾರ ನಡೆಸುತ್ತಿದ್ದಾರಲ್ಲದೆ, ನಮಗೆ ಮತ ನೀಡಿ ನಿಮ್ಮ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಇನ್ನು ಇದೇ ಕ್ಷೇತ್ರದ ಜನಪ್ರತಿನಿಧಿಯಾಗಿ ಸಚಿವ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದ ಮಹದೇವಪ್ರಸಾದ್ ಅವರು ನೀರಿನ ಸಮಸ್ಯೆ ಬಗ್ಗೆ ಗಮನಹರಿಸಿರಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದು ಅವರ ನಿಧನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪತ್ನಿ ಗೀತಾಮಹದೇವಪ್ರಸಾದ್ ಅವರಿಗೆ ಸವಾಲ್ ಆಗಿ ಪರಿಣಮಿಸಿದೆ.
ನಾನು ಪ್ರತಿ ಹಳ್ಳಿಗೆ ತೆರಳಿದ್ದೇನೆ ಜನರ ಸಂಕಷ್ಟ ನನಗೆ ಗೊತ್ತಾಗಿದೆ. ಹೀಗಾಗಿ ಇನ್ನು ಆರು ತಿಂಗಳಲ್ಲಿ ಎಲ್ಲ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂಬ ಮಾತನ್ನು ಅವರು ಹೇಳುತ್ತಿದ್ದಾರೆ. ಆದರೆ ಜನ ಮಾತ್ರ ಇದ್ಯಾವುದಕ್ಕೂ ಕಿವಿಕೊಡದೆ ಖಾಲಿ ಕೊಡ ಹಿಡಿದು ನೀರು ಎಲ್ಲಿ ಸಿಗುತ್ತೋ ಎಂದು ಹುಡುಕಾಡುತ್ತಿದ್ದಾರೆ.