ಮೂಡಿಗೆರೆ: ರಾತ್ರೋ ರಾತ್ರಿ ಲಾರಿ, ಟಿಪ್ಪರ್, ಟ್ರಾಕ್ಟರ್ ಗಳು ಪಟ್ಟಣದ ರಸ್ತೆಗಳ ಮದ್ಯ ಭಾಗದಲ್ಲಿ ಅಕ್ರಮ ಮರಳು ಸುರಿಯುತ್ತಿದ್ದು, ಇದರಿಂದ ರಸ್ತೆಯಲ್ಲಿ ಸಾಗುವ ವಾಹನಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಪಟ್ಟಣದಲ್ಲಿ ಖಾಸಗಿ ಒಡೆತನದ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗೆ ರಾತ್ರಿ ವೇಳೆ ಪರವಾನಗಿ ರಹಿತ ಅಕ್ರಮ ಮರಳು ತುಂಬಿಕೊಂಡು ಪೊಲೀಸರ ಭೀತಿಯಿಂದ ರಸ್ತೆಗಳ ಮದ್ಯೆ ಮರಳನ್ನು ಸುರಿದು ಗಡಿಬಿಡಿಯಿಂದ ತೆರಳುತ್ತಿದ್ದಾರೆ.
ಜೆ.ಎಂ.ರಸ್ತೆ, ದೊಡ್ಡಿಬೀದಿ, ಛತ್ರಮೈಧಾನ ಸಹಿತ ಬಿಳಗುಳದಲ್ಲೂ ಇಂತಹ ಕೃತ್ಯಗಳು ನಡೆಯುತ್ತಿವೆ. ಪಟ್ಟಣದ ವಿವಿಧ ಗಲ್ಲಿ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಅಲ್ಲದೆ ವಾರದ ಸಂತೆಯ ದಿನವಾದ ಶುಕ್ರವಾರ ವಾಹನಗಳ ದಟ್ಟಣೆ ಸಮಸ್ಯೆಯಾಗಿದೆ. ವ್ಯಾಪಾರ ಮಳಿಗೆಗಳಲ್ಲಿ ಖಾಲಿ ಮಾಡಲು ಸರಕು ತುಂಬಿದ ಲಾರಿಗಳು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಿಂತು ಕಿರಿಕಿರಿಯನರನು ಉಂಟು ಮಾಡುತ್ತಿವೆ. ಟ್ರಾಕ್ಟರ್, ಟಿಲ್ಲರ್ಗಳು ಪಟ್ಟಣದೊಳಗೆ ನಿಧಾನ ಗತಿಯಲ್ಲಿ ಚಲಿಸಿ ವಾಹನ ದಟ್ಟಣೆಗೆ ಕಾರಣವಾಗುತ್ತಿವೆ. ಇವುಗಳಿಗೆ ಕಡಿವಾಣ ಹಾಕಲು ಪೊಲೀಸ್ ಠಾಣೆಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆದರೂ ಪ್ರಯೋಜನವಾಗಿಲ್ಲ. ಅಂದಿನ ಸಭೆಯ ಯಾವ ನಿರ್ಣಯಗಳೂ ಕಾರ್ಯಗತವಾಗಿಲ್ಲ.
ಜಿಲ್ಲಾಧಿಕಾರಿಗಳು ಈ ಅವ್ಯವಸ್ಥೆಯ ಬಗ್ಗೆ ಗಮನ ಹರಿಸುವ ಮೂಲಕ ಪಟ್ಟಣದ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕು. ಅಲ್ಲದೇ ಪಟ್ಟಣದ ಪ್ರಮುಖ ರಸ್ತೆಗಳ ಅಗಲೀಕರಣ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.