ಚಿಕ್ಕಮಗಳೂರು: ಡಿಎಫ್ಓ ಅವರಿಗೆ ಬೆದರಿಕೆ ಹಾಕಿ ಬ್ಲಾಕ್ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
ಮತ್ತೋಡಿ ವಲಯದ ಉಪವಲಯ ಅರಣ್ಯಾಧಿಕಾರಿ ಎಂ.ಪಿ.ಸಂತೋಷ್ ಕುಮಾರ್, ಸಯ್ಯದ್ ಖದೀರ್, ಚಿಕ್ಕಮಗಳೂರು ವಲಯದ ಅರಣ್ಯ ರಕ್ಷಕ ಯು.ಕೆ.ಪ್ರದೀಪ್ ಅಮಾನತು ಗೊಂಡಿರುವ ಅಧಿಕಾರಿಗಳು. ಈ ಮೂವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥರು ಮಾ.27 ರಂದೇ ಅಮಾನತು ಪಡಿಸಿ ಆದೇಶಿಸಿದ್ದಾರೆ. ಮಾ. 6 ಮತ್ತು 7 ರಂದು ಡಿ.ಎಫ್.ಓ ಚಂದ್ರಣ್ಣ ಅವರ ಕಛೇರಿ ಮುಂಭಾಗ ಎರಡು ದಿನಗಳ ಕಾಲ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಈ ಮೂವರು ಕುಮ್ಮಕ್ಕು ನೀಡಿದ್ದರೆಂದು ಆರೋಪಿಸಲಾಗಿದೆ.
ಡಿ.ಎಫ್.ಓ ಚಂದ್ರಣ್ಣ ಅವರ ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬುದು ನೌಕರರ ಆರೋಪ. ನೌಕರರನ್ನು ದಾರಿ ತಪ್ಪಿಸಲಾಗಿತ್ತು. ಅಸಲಿಗೆ ಈ ಮೂವರು ಡಿ.ಎಫ್.ಓ ಚಂದ್ರಣ್ಣ ಅವರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದರು. ಅಲ್ಲದೆ ಚಂಧ್ರಣ್ಣ ಅವರನ್ನು ಬ್ಲಾಕ್ಮೇಲ್ ಮಾಡುತ್ತಿದ್ದರು. ಇದು ಅವರ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು ಈ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಅನುಮತಿಗಾಗಿ ಡಿಎಫ್ಓ ಚಂದ್ರಣ್ಣ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಇನ್ನು ಸೇವೆಯಲ್ಲಿ ಸಮವಸ್ತ್ರದ ಶಿಷ್ಟಾಚಾರ ಪಾಲಿಸಬೇಕಿದೆ.
ಈ ಪ್ರಕರಣದಲ್ಲಿ ಸಮವಸ್ತ್ರದ ಮೇಲಂಗಿಯನ್ನು ಕಳಚಿ ಶಿಷ್ಟಾಚಾರದ ಮಿತಿಯನ್ನು ಮೀರಿವರ್ತಿಸಿದ್ದು ಹಾಗೂ ಮೇಲಾಧಿಕಾರಿಗಳ ವಿರುದ್ಧ ಅವ್ಯಾಚ್ಚ ಮತ್ತು ಕೆಟ್ಟ ಶಬ್ದಗಳನ್ನು ಬಳಸಿದ್ದು ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ ಅಕ್ರಮವಾಗಿ ಬೀಗ ಹಾಕಿರುವುದು. ಇಲಾಖೆ ಅಧಿಕಾರಿಗಳ ಮಾತು ಧಿಕ್ಕರಿಸಿದ್ದನ್ನು ಇಲಾಖೆ ಶಿಸ್ತು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಹಾಗೆಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಚಿಕ್ಕಮಗಳೂರಿನ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಹಬ್ಬಿತ್ತು. ಅದನ್ನು ಕಡೆಗಣಿಸಿ ಪ್ರತಿಭಟನೆ ನಡೆಸಿರುವುದು ಖಂಡನೀಯವೆಂದು ಅಮಾನತು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು ಎಂದು ತಿಳಿದು ಬಂದಿದೆ.