ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಸಿರವಾಸೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ಚಕ್ತಿ ಸರಬರಾಜು ಮಾಡುವಂತೆ ಆಗ್ರಹಿಸಿ ಸಿರವಾಸೆ ಗ್ರಾಪಂ ಕಛೇರಿ ಎದುರು ಪ್ರತಿಭಟನೆ ನಡೆಸಿದ ಸಿಪಿಐ ಕಾರ್ಯಕರ್ತರು ನಿರಂತರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದಟ್ಟ ಮಲೆನಾಡು ಮತ್ತು ಅರಣ್ಯ ಪ್ರದೇಶಗಳಿಂದ ಆವರಿಸಿರುವ ಸಿರವಾಸೆ ಭಾಗದ ಗ್ರಾಮಗಳಿಗೆ ಸರಿಯಾದ ವಿದ್ಯುತ್ ಪೂರೈಕೆ ಇಲ್ಲದೆ ಜನ ಕತ್ತಲಿನಲ್ಲಿಯೇ ಬದುಕು ನಡೆಸುವಂತಾಗಿದೆ. ದಿನಕ್ಕೆ ಕನಿಷ್ಠ 2 ಗಂಟೆಯಷ್ಟು ವಿದ್ಯುತ್ ಸರಬರಾಜು ಇರುವುದಿಲ್ಲ. ಇದರ ಪರಿಣಾಮ ದಿನನಿತ್ಯದ ವ್ಯವಹಾರ, ಕುಡಿಯುವ ನೀರು, ಗೃಹಿಣಿಯರ ಅಡುಗೆ ಕಾರ್ಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ತೀವ್ರ ತೊಂದರೆಯುಂಟಾಗುತಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹ ಗಂಭೀರ ಪರಿಣಾಮ ಬೀರುತ್ತಿದೆ ಮನವಿಯಲ್ಲಿ ತಿಳಿಸಿದರು.
ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆಯಲಾಗಿದ್ದರೂ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಒಂದಿಷ್ಟು ವಿದ್ಯುತ್ ನೀಡುವ ಮೆಸ್ಕಾಂ ಇಲಾಖೆ ನಂತರ ಪುನಃ ವಿದ್ಯುತ್ ಕಡಿತ ಮುಂದುವರಿಸುತ್ತಿದೆ. ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸಲು ಮಲ್ಲಂದೂರಿನಲ್ಲಿ ಮಿನಿಸಬ್ಸ್ಟೇಷನ್ (ಕಿರು ವಿದ್ಯುತ್ ಪ್ರಸರಣ ಘಟಕ) ಸ್ಥಾಪಿಸಿ ಎಕ್ಸ್ ಪ್ರೆಸ್ ಲೈನ್ ಅಳವಡಿಸಲಾಗುವುದು ಎಂದು ಭರವಸೆಯೂ ಇನ್ನೂ ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ನಗರದ ಮಲ್ಲಂದೂರಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಎಕ್ಸ್ಪ್ರೆಸ್ ಲೈನ್ ಗೆ ಸಂಪರ್ಕವು ನೀಡಿರುವುದಿಲ್ಲ. ಅಲ್ಲದೇ ಗ್ರಾಮೀಣ ಭಾಗದ ವಿದ್ಯುತ್ ಸರಬರಾಜಿನ ನಿರ್ವಹಣೆಗೆ ಸಿಬ್ಬಂದಿಗಳು ಇಲ್ಲದಿರುವುದು ಸಹ ವಿದ್ಯುತ್ ಸಮಸ್ಯೆ ತೀವ್ರವಾಗಲು ಕಾರಣವಾಗಿದೆ.