ಮಡಿಕೇರಿ:ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ, 29 ರಿಂದ ಜೂನ್, 02 ರವರೆಗೆ ಸೇನಾ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ ಎಂದು ಸೇನಾ ಭರ್ತಿ ವಿಭಾಗದ ಮುಖ್ಯಸ್ಥರಾದ ಕರ್ನಲ್ ಜಯದೀಪ್ ಶರ್ಮ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸೇನಾ ನೇಮಕಾತಿ ರ್ಯಾಲಿ ಸಂಬಂಧ ಜಿಲ್ಲಾಧಿಕಾರಿ(ಪ್ರಭಾರ) ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಂಗಳೂರು ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯ ವತಿಯಿಂದ 2017ರ ಮೇ, 29 ರಿಂದ ಜೂನ್, 02 ರವರೆಗೆ ಮಡಿಕೇರಿಯ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ವಿವರಣೆ ನೀಡಿದರು.
ಆಸಕ್ತಿಯುಳ್ಳ ಉತ್ಸಾಹಿ ಯುವಕರು 2017ರ ಮೇ, 14 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್ಸೈಟ್: www.joinindianarmy.nic.inನಲ್ಲಿ ನೋಂದಾಯಿಸಬೇಕು. ಭಾರತೀಯ ಸೇನೆಯಲ್ಲಿ ಸೈನಿಕ ಲಿಪಿಕ/ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ಸಾಮಾನ್ಯ ಕರ್ತವ್ಯ, ಶುಶ್ರೂಷ ಸಹಾಯಕ, ಪಶುವೈದ್ಯ, ಸೈನಿಕ ಟ್ರೇಡ್ಸ್ಮೆನ್, ಸೈನಿಕ ತಾಂತ್ರಿಕ ವರ್ಗಗಳಲ್ಲಿ (ಕರ್ನಾಟಕದ 13 ಜಿಲ್ಲೆಯವರಿಗೆ) ಅಭ್ಯರ್ಥಿಗಳು ರ್ಯಾಲಿಯ ಹತ್ತು ದಿನಗಳ ಮುನ್ನ ಈ ವೆಬ್ ಸೈಟ್ ನಲ್ಲಿ www.joinindianarmy.nic.inಲಾಗಿನ್ ಮಾಡಿ ಅಡ್ಮಿಟ್ ಕಾರ್ಡ್ ಅನ್ನು ಉತ್ತಮ ದರ್ಜೆಯ ಕಾಗದದ ಮೇಲೆ ಪ್ರಿಂಟ್ ತೆಗೆದುಕೊಳ್ಳುವುದು. ಅಡ್ಮಿಟ್ ಕಾರ್ಡ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಹಾಜರಾಗುವ ದಿನಾಂಕ ಮತ್ತು ಸ್ಥಳದ ಮಾಹಿತಿಯೊಂದಿಗೆ ಆಯಾಯ ಜಿಲ್ಲೆಗಳ ಅಭ್ಯರ್ಥಿಗಳು ತಮಗೆ ನೀಡಲಾಗಿರುವ ದಿನಾಂಕದಂದು ಅಡ್ಮಿಟ್ ಕಾರ್ಡ್ ನ ಜೊತೆಗೆ ಬೆಳಗಿನ ಜಾವ 4 ಗಂಟೆಗೆ ರ್ಯಾಲಿಯ ಮೈದಾನದಲ್ಲಿ ಇರಬೇಕು ಎಂದು ಕರ್ನಲ್ ಜಯದೀಪ್ ಶರ್ಮ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಎಂ.ಶೆಟ್ಟಿ, ಜಿಲ್ಲಾ ಉದ್ಯೋಗವಿನಿಮಯಾಧಿಕಾರಿ ಸಿ.ಜಗನ್ನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ, ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀಬಾಯಿ, ಡಿವೈಎಸ್ಪಿ ಛಬ್ಬಿ, ಸೇನಾಧಿಕಾರಿಗಳು ಇತರರು ಇದ್ದರು.