ಹನೂರು: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡದ ಕೌದಳ್ಳಿ ಗ್ರಾಮ ಪಂಚಾಯಿತಿ ವಿರುದ್ಧ ಎಸ್ಡಿಪಿಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗ್ರಾಪಂ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಇದಕ್ಕೂ ಮೊದಲು ಕೆಲ ಸಮಯಗಳ ಕಾಲ ಕೌದಳ್ಳಿ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುಧ್ಧ ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಸ್ ಡಿಪಿಐ ಸಂಘಟನೆಯ ಅಧ್ಯಕ್ಷ ನೂರುಲ್ಲಾ ಮಾತನಾಡಿ ಕಳೆದ ಎರಡು ತಿಂಗಳ ಹಿಂದೆ ಪ್ರತಿಭಟನೆ ಮಾಡಿದಾಗ ನೀರು ಸರಬರಾಜು ಮಾಡುವ ಭರವಸೆ ನೀಡಿದ್ದರು. ಆದರೆ ಅಂದು ಒಪ್ಪಿಗೆ ನೀಡಿದ್ದ ಪಿಡಿಓ ನೀರಿನ ತೊಂದರೆ ನೀಗಿಸುವಲ್ಲಿ ವಿಫಲರಾಗಿದ್ದಾರೆ ಹಾಗಾಗಿ ನಮ್ಮ ಸಮಸ್ಯೆಯನ್ನು ತಾಲೂಕು ಕಾರ್ಯನಿರ್ವಹಣಾಧಿಕಾರಿಯ ಗಮನಕ್ಕೆ ತಂದು ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ನಂತರ ಪಂಚಾಯಿತಿಗೆ ಮುತ್ತಿಗೆ ಹಾಕಿರುವ ವಿಷಯವನ್ನು ತಿಳಿದ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಈ ಸಂದರ್ಭದಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ರಾಮಾಪುರ ಪೊಲೀಸ್ ಠಾಣೆಯವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.