ಬೇಲೂರು: ರಾತ್ರಿ ಆಲಿಕಲ್ಲು ಸಹಿತ ಸುರಿದ ಮಳೆಗೆ ಬೇಲೂರು ವ್ಯಾಪ್ತಿಯ ಜನ ಬೆಚ್ಚಿ ಬಿದ್ದಿದ್ದಾರೆ. ಬಿಸಿಲಿನಿಂದ ಬಸವಳಿದಿದ್ದ ಮಂದಿಗೆ ಮಳೆ ಬಂದಿದ್ದು ಖುಷಿಯಾಯಿತಾದರೂ ಭಾರೀ ಗಾತ್ರದ ಆಲಿಕಲ್ಲು ಸುರಿದಿತ್ತು ಭಯ ತಂದಿದೆ.
ಮಳೆ ಬಂದಿದ್ದರಿಂದ ರೈತರಿಗೆ ಹರ್ಷವಾಗಿದ್ದರೆ, ಆಲಿಕಲ್ಲು ಬಿದ್ದಿದ್ದರಿಂದ ಆತಂಕವಾಗಿದೆ. ಬರದ ನಡುವೆಯೂ ಮಾಡಿದ್ದ ಕೃಷಿ ಫಸಲು ನಾಶವಾಗಿದೆ. ರಾತ್ರಿ ವೇಳೆ ಮನೆಯ ಛಾವಣಿ ಮೇಲೆ ಬೀಳುತ್ತಿದ್ದ ಆಲಿಕಲ್ಲಿನ ಶಬ್ದಕ್ಕೆ ಕೆಲವರು ಬೆಚ್ಚಿ ಬಿದ್ದರೆ ಇನ್ನು ಕೆಲವರು ಮನೆಯ ಹೆಂಚು ಒಡೆದು ಹೋಗುತ್ತದೆ ಎಂಬ ಭಯದಿಂದಲೇ ಕಾದು ಕುಳಿತಿದ್ದರು. ಭಾರೀ ಗಾತ್ರದ ಆಲಿಕಲ್ಲು ರಾತ್ರಿಯೇ ಬಿದ್ದಿದ್ದರೂ ಬೆಳಗ್ಗಿನ ತನಕ ಕರಗದೆ ಇದ್ದಿದ್ದು ಗ್ರಾಮಸ್ಥರಲ್ಲಿ ಆತಂಕ ತಂದಿತ್ತು. ಅರೇಹಳ್ಳಿ ಹೋಬಳಿಯ ಇಂಡಿತೊಳಲು ಸುತ್ತಮುತ್ತಲಿನ ಜನ ಬೆಳಗ್ಗೆ ಕರಗದೆ ಇದ್ದ ಆಲಿಕಲ್ಲನ್ನು ಸಂಗ್ರಹಿಸಿ ಅಚ್ಚರಿ ಪಡುತ್ತಿದ್ದದ್ದು ಕಂಡು ಬಂತು. ಆಲಿಕಲ್ಲು ಬಿದ್ದಿದ್ದರಿಂದ ಮಾವು ಸೇರಿದಂತೆ ಇತರೆ ಫಸಲಿಗೆ ಭಾರಿ ಹಾನಿಯಾಗಿದ್ದು ರೈತರನ್ನು ಆತಂಕಕ್ಕೆ ದೂಡಿದೆ.