ಮಡಿಕೇರಿ: ಫೋಟೋ ಕ್ಲಿಕ್ಕಿಸಲು ಮುಂದಾದ ಫೋಟೋಗ್ರಾಫರ್ ನ ಕ್ಯಾಮರಾವನ್ನು ನೋಡಿದ ಸಾಕಾನೆ ಬೆಚ್ಚಿ ಓಡಿದ ಘಟನೆ ಕುಶಾಲನಗರ ಬಳಿಯ ಆನೆಕಾಡು ಅರಣ್ಯದಲ್ಲಿ ನಡೆದಿದೆ.
ಕೋವಿಯಿಂದ ಗುಂಡು ಹಾರಿಸುವ ಮೂಲಕ ಅರಿವಳಿಕೆ ನೀಡಿ ಸೆರೆಹಿಡಿಯಲಾಗಿದ್ದ ಕಾಡಾನೆಯನ್ನು ಬಳಿಕ ಪಳಗಿಸಿ, ತರಬೇತಿ ನೀಡಿದ್ದರಿಂದ ಅದು ಮಾವುತ ಮತ್ತು ಕಾವಾಡಿಗಳ ಮಾತನ್ನು ಕೇಳುತ್ತಾ ಸಾಕಾನೆಗಳ ನಡುವೆ ಹೊಂದಿಕೊಂಡು ಸಾಗುತ್ತಿದೆ. ಇಂತಹ ಸಾಕಾನೆ ಕ್ಯಾಮರಾ ಕಂಡು ಓಡಿದ್ದರಿಂದ ಅದರೊಂದಿಗಿದ್ದ ಮಾವುತ ಮತ್ತು ಕಾವಡಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಇಷ್ಟಕ್ಕೂ ಈ ಆನೆ ಓಡಿದ್ದಾದರೂ ಏಕೆಂದರೆ ಫೋಟೋಗ್ರಾಫರ್ ಕ್ಯಾಮರಾವನ್ನು ಅದರ ಮುಂದೆ ಹಿಡಿದಿದ್ದೇ ಕಾರಣವಾಗಿದೆ.
ಕೆಲವು ಸಮಯಗಳ ಹಿಂದೆ ಆನೆಕಾಡಿಗೆ ಬೆಂಕಿಬಿದ್ದು ಅರಣ್ಯವೇ ನಾಶವಾಗಿ ಹೋಗಿತ್ತು. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ತಿಳಿದು ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆನೆಕಾಡಿಗೆ ತೆರಳಿದ್ದರು. ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಆನೆಯನ್ನು ಕಂಡಿದ್ದಾರೆ. ಇದರ ಮೇಲೆ ಮಾವುತ ಹಾಗೂ ಕಾವಡಿಗರು ಕುಳಿತು ಬರುತ್ತಿರುವ ದೃಶ್ಯ ಒಂದು ರೀತಿಯಲ್ಲಿ ಸ್ವಲ್ಪ ವಿಭಿನ್ನವಾಗಿರುವಂತೆ ಕಂಡಿದೆ ಹಾಗಾಗಿ ತಮ್ಮ ಬ್ಯಾಗ್ ನಲ್ಲಿದ್ದ ಕ್ಯಾಮರಾವನ್ನು ತೆಗೆದು ಅದರ ಮುಂದೆ ಹಿಡಿದು ಇನ್ನೇನು ಕ್ಲಿಕ್ಕಿಸಬೇಕೆಂದುಕೊಳ್ಳುವಾಗಲೇ ಎದುರಿನಿಂದ ಬರುತ್ತಿದ್ದ ಆನೆಗೆ ಕ್ಯಾಮರಾ ಬಹುಶಃ ಬಂದೂಕಿನಂತೆ ಕಂಡಿರಬೇಕು. ತಕ್ಷಣ ಅದು ಬೆಚ್ಚಿದಲ್ಲದೆ ಓಡಲು ಮುಂದಾಗಿದೆ. ಈ ಸಂದರ್ಭ ಆನೆ ಮೇಲಿದ್ದ ಮಾವುತ ಮತ್ತು ಕಾವಡಿಗರು ದಿಢೀರನೆ ಕೆಳಕ್ಕಿಳಿದು ಬಚಾವಾಗಿದ್ದಾರೆ. ಅಷ್ಟೇ ಅಲ್ಲದೆ, ಫೋಟೋಗ್ರಾಫರ್ನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆ ನಂತರ ಆನೆ ಹೋದ ದಿಕ್ಕಿನತ್ತ ಕಾಡಿಗೆ ಹೋಗಿ ಅದನ್ನು ಹಿಡಿದು ನಿಲ್ಲಿಸಿದ್ದಾರೆ.