ಯಳಂದೂರು: ಸೇತುವೆ ಎಂದ ಮೇಲೆ ಅದರ ಎರಡು ಬದಿಯಲ್ಲೂ ತಡೆಗೋಡೆ ಇದ್ದೇ ಇರುತ್ತದೆ. ಆದರೆ ಯಳಂದೂರು ತಾಲೂಕಿನ ಚಂಗಚಹಳ್ಳಿಯಿಂದ ಗೂಳಿಪುರ ಗ್ರಾಮಕ್ಕೆ ಹಾದು ಹೋಗುವ ಮುಖ್ಯರಸ್ತೆಯಲ್ಲಿರುವ ಕಬಿನಿ ಸೇತುವೆಗೆ ತಡೆಗೋಡೆಗಳಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ರಸ್ತೆಯಲ್ಲಿ ಪ್ರತಿ ದಿನವೂ ನೂರಾರು ವಾಹನಗಳು ಓಡಾಡುತ್ತಿದ್ದು, ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ. ಸೇತುವೆ ನಿರ್ಮಾಣ ಮಾಡುವ ಸಂದರ್ಭ ತಡೆಗೋಡೆ ನಿರ್ಮಾಣ ಮಾಡಲಾಗಿತ್ತಾದರೂ ತದ ನಂತರದ ವರ್ಷಗಳಲ್ಲಿ ತಡೆಗೋಡೆ ಶಿಥಿಲಗೊಂಡು ನೆಲಕ್ಕುರುಳಿದೆ. ಆದರೆ ಅದನ್ನು ದುರಸ್ತಿ ಮಾಡುವ ಕೆಲಸಕ್ಕೆ ಯಾರೂ ಮುಂದಾಗದ ಕಾರಣದಿಂದ ದುಸ್ಥಿತಿಯಲ್ಲಿದೆ.
ಸೇತುವೆಗೆ ತಡೆಗೋಡೆಯಿಲ್ಲದ ಕಾರಣದಿಂದ ಸೇತುವೆ ಬಳಿ ತೆರಳುವಾಗ ಭಯವಾಗುತ್ತದೆ. ಅಷ್ಟೇ ಅಲ್ಲ ಹೊರಗಿನಿಂದ ಬರುವ ಚಾಲಕರಿಗೆ ಸೇತುವೆ ಇದೆ ಎಂಬುವುದೇ ಗೊತ್ತಾಗುವುದಿಲ್ಲ. ಹೀಗಾಗಿ ಒಂದುವೇಳೆ ಎಚ್ಚರ ತಪ್ಪಿ ಬದಿಗೆ ತೆರಳಿದರೆ ಅಪಾಯ ತಪ್ಪಿದಲ್ಲ.
ಬೇಸಿಗೆಯ ಸಂದರ್ಭ ನೀರು ಬತ್ತಿಹೋಗಿದ್ದು, ಮಳೆಗಾಲದಲ್ಲಿ ಈ ನಾಲೆಯಲ್ಲಿ ಕಬಿನಿ ನೀರು ಹರಿಯುವುದರಿಂದ ಭಯದಲ್ಲೇ ವಾಹನ ಚಾಲಕರು ಚಾಲನೆ ಮಾಡಬೇಕಾಗಿದೆ. ಬೇಸಿಗೆಯಾಗಿರುವುದರಿಂದ ಈಗಲೇ ತಡೆಗೋಡೆಯನ್ನು ಸಂಬಂಧಿಸಿದ ಕಾವೇರಿ ನೀರಾವರಿ ನಿಗಮ ನಿರ್ಮಿಸಿದರೆ ಅನುಕೂಲವಾಗಬಹುದೇನೋ? ಆದರೆ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಅಷ್ಟೇ ಅಲ್ಲದೆ ಆ ವ್ಯಾಪ್ತಿ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಹೀಗಾಗಿ ಹಲವರು ಬಿದ್ದು ಗಾಯಗೊಂಡಿದ್ದಾರೆ.
ಇನ್ನಾದರೂ ಇದರತ್ತ ಗಮನಹರಿಸಿ ಸೇತುವೆಗೆ ತಡೆಗೋಡೆಯನ್ನು ಸಂಬಂಧಿಸಿದವರು ನಿರ್ಮಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.