ಮಡಿಕೇರಿ: ಕಾಡಂಚಿನ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಕಾರ್ಮಿಕರು, ತೋಟದ ಮಾಲಿಕರ ನಿದ್ದೆಗೆಡಿಸುವಂತೆ ಮಾಡಿದ್ದ ಕಾಡಾನೆಗಳು ಈಗ ರಾಜ ಮಾರ್ಗಗಳಲ್ಲಿ ಓಡಾಡುವಂತಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ.
ಇಲ್ಲಿನ ಹೆಚ್ಚಿನ ಜನ ತೋಟಗಳ ನಡುವೆ ಮನೆಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದು, ಯಾವಾಗ ಕಾಡಾನೆಗಳು ದಾಳಿ ಮಾಡುತ್ತವೆಯೋ ಎಂಬ ಭಯದಲ್ಲಿ ದಿನಕಳೆಯುವಂತಾಗಿದೆ. ಮನೆಯಿಂದ ಹೊರ ಬಂದವರ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳು ಸಾಯಿಸುತ್ತಿವೆ. ಈಗಾಗಲೇ ಹಲವು ಅಮಾಯಕರು ಕಾಡಾನೆಗಳ ದಾಳಿಗೆ ಸಿಕ್ಕಿ ಪ್ರಾಣ ಕಳೆದು ಕೊಂಡಿದ್ದಾರೆ. ಇತ್ತೀಚೆಗೆ ಆನೆಕಾಡು ಅರಣ್ಯಕ್ಕೆ ಬೆಂಕಿಬಿದ್ದು ಅರಣ್ಯ ನಾಶವಾಗಿದ್ದರೆ ಮತ್ತೊಂದೆಡೆ ಮೇವು ಕೊರತೆಯೂ ಅರಣ್ಯ ಬಿಟ್ಟು ನಾಡಿನತ್ತ ಬರಲು ಕಾರಣವಾಗುತ್ತಿದೆ.
ಕಾಫಿ ತೋಟದಲ್ಲಿ ಎಲ್ಲೆಂದರಲ್ಲಿ ಅಂಡಲೆಯುವ ಕಾಡಾನೆಗಳು ತೋಟದ ಮಧ್ಯೆ ಇರುವ ಬಾಳೆ, ಅಡಿಕೆ, ತೆಂಗಿನ ಮರಗಳನ್ನೆಲ್ಲ ನಾಶ ಪಡಿಸುತ್ತಿವೆ. ಮತ್ತೊಂದೆಡೆ ತೋಟಗಳ ನಡುವೆ ಹಲಸಿನ ಮರಗಳಿದ್ದು, ಇದೀಗ ಹಣ್ಣು ಬಿಡುವ ಕಾಲವಾಗಿದ್ದರಿಂದ ಅದರ ವಾಸನೆಯ ಜಾಡು ಹಿಡಿದುಕೊಂಡು ಬರುತ್ತಿವೆ. ಇದರಿಂದ ಕಾಫಿ ತೋಟದಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳನ್ನು ಸಾಯಿಸಿರುವ ಘಟನೆ ಇನ್ನೂ ಹಸಿರಾಗಿದ್ದು, ಕಾಡಾನೆಗಳು ಕಾಫಿ ತೋಟದಲ್ಲಿ ಮಾತ್ರವಲ್ಲದೆ ಸೋಮವಾರಪೇಟೆಯ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವರ್ ಕೊಲ್ಲಿ, ಕಾಜೂರು ಭಾಗದಲ್ಲಿರುವ ಟಾಟಾ ಕಾಫಿ ಎಸ್ಟೇಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗೆ ಅಟ್ಟುವ ಪ್ರಯತ್ನಗಳು ವಿಫಲವಾಗುತ್ತಿದೆ.
ಈ ಮಧ್ಯೆ ಸಾರ್ವಜನಿಕ ರಸ್ತೆ ಮಧ್ಯೆ ನಡೆದುಕೊಂಡು ಹೋಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು ಜೀವ ಕೈಯ್ಯಲ್ಲಿಡಿದುಕೊಂಡು ತೆರಳಬೇಕಾಗಿದೆ. ಯಾವುದೇ ಭಯವಿಲ್ಲದೆ ಎಲ್ಲೆಂದರಲ್ಲಿ ಸಂಚರಿಸುವ ಕಾಡಾನೆಗಳು ಯಾವಾಗ ಎಲ್ಲಿಗೆ ಪಯಣ ಬೆಳೆಸುತ್ತವೆ ಎನ್ನಲಾಗುವುದಿಲ್ಲ. ಈ ವ್ಯಾಪ್ತಿಯಲ್ಲಿ ಮನೆಗಳಿದ್ದು, ಮನೆಯ ಸುತ್ತಲೂ ಬೆಳೆಸಿದ್ದ ಬಾಳೆ ಸೇರಿದಂತೆ ಇನ್ನಿತರ ಕೃಷಿ ಫಸಲನ್ನು ನಾಶ ಮಾಡುತ್ತಿವೆ. ಇದರಿಂದ ಭಯಗೊಂಡಿರುವ ಜನ ಹೊರಗೆ ಹೋದವರು ಸುರಕ್ಷಿತವಾಗಿ ಮನೆಗೆ ಬಂದು ತಲುಪಿದರೆ ಸಾಕಪ್ಪ ಎಂದು ಪ್ರಾರ್ಥಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಿ ಅವು ಅರಣ್ಯ ಬಿಟ್ಟು ನಾಡಿನತ್ತ ಬಾರದಿರುವ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಬೇಕಾಗಿದೆ. ಇಲ್ಲದೆ ಹೋದರೆ ಕಾಡಾನೆ ಮತ್ತು ಮನುಷ್ಯರ ನಡುವೆ ಸಂಘರ್ಷ ಮುಂದುವರೆಯುತ್ತಲೇ ಹೋಗುವುದರಲ್ಲಿ ಸಂಶಯವಿಲ್ಲ.