ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ನೆಲೆಸಿರುವ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆಸಲಾಗಿದೆ.
ಶನಿವಾರಸಂತೆ ಪಟ್ಟಣದ ಶ್ರೀ ಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ಈ ಸಂಪ್ರದಾಯವನ್ನು ಕಳೆದ ಮೂರು ವರ್ಷಗಳಿಂದ ಆರಂಭಿಸಲಾಗಿದ್ದು, ಸಮುದ್ರ ಮಟ್ಟದಿಂದ 5778 ಅಡಿ ಎತ್ತರದಲ್ಲಿರುವ ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಇಲ್ಲಿ ಮಳೆಗಾಗಿ ಪೂಜೆ ಸಲ್ಲಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿದ್ದು, ವಿವಿಧ ಗ್ರಾಮಗಳ ಸುಮಾರು 50 ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪಾದಯಾತ್ರೆಯಲ್ಲಿ ತೆರಳುವ ಮುನ್ನ ಮೊದಲಿಗೆ ಆಲೂರು ಸಿದ್ದಾಪುರ ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ವಾದ್ಯಗೋಷ್ಠಿಯೊಂದಿಗೆ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿ ದೇವಾಲಯದಲ್ಲಿ ಭಜನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ಹಲವು ಬಗೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಹಾಗೆನೋಡಿದರೆ ಕೊಡಗಿನಲ್ಲಿ ಮಳೆ ಬಾರದಿದ್ದಾಗ ಬೇಸಿಗೆಯಲ್ಲಿ ಊರ ದೇವರಿಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವುದು ಹೊಸದೇನು ಅಲ್ಲ. ಕೊಡಗಿನ ಆರಾಧ್ಯ ದೈವ ಇಗ್ಗುತ್ತಪ್ಪ. ಕಾವೇರಮ್ಮ ಸೇರಿದಂತೆ ಹಲವು ದೇವರಿಗೆ ಮೊರೆಯಿಡುವುದು ಹಿಂದಿನಿಂದಲೂ ನಡೆದು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಕಾಡಿನ ನಡುವೆ, ಬೆಟ್ಟದ ಮೇಲೆ ಹಲವಾರು ದೇವರುಗಳು ನೆಲೆಸಿದ್ದು, ಬೊಟ್ಲಪ್ಪಮ ಮಳೆಮಲ್ಲೇಶ್ವರ, ಮಹದೇಶ್ವರ ಹೀಗೆ ಹಲವು ದೇವಾಲಯಗಳಿದ್ದು, ಈ ದೇವಾಲಯಗಳಲ್ಲಿ ದಿನನಿತ್ಯ ಪೂಜೆಕೈಂಕರ್ಯಗಳು ನಡೆದರೂ ಕೂಡ ವರ್ಷಕ್ಕೊಮ್ಮೆ ಬೇಸಿಗೆಯ ದಿನಗಳಲ್ಲಿ ಊರವರು ದೇವಾಲಯದಲ್ಲಿ ಸೇರಿ ಪೂಜೆ ಸಲ್ಲಿಸಿ ಮಳೆ, ಬೆಳೆಯಾಗಿ ಸುಭೀಕ್ಷೆಯುಂಟಾಗಲೆಂದು ಪ್ರಾಥರ್ಿಸುವುದು ಸಾಮಾನ್ಯವಾಗಿದೆ.
ಕೆಲವು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹೊರಬರುತ್ತಿದ್ದಂತೆ ಮಳೆ ಸುರಿದ ನಿದರ್ಶನಗಳನ್ನು ಹಿರಿಯ ಜೀವಗಳು ನೆನಪು ಮಾಡಿಕೊಳ್ಳುತ್ತವೆ. ಕೊಡಗಿನ ಹಿಂದೆ ಮಳೆ ಸುರಿದು ಅದರಿಂದಾದ ಅನಾಹುತಗಳನ್ನು ತಡೆಯಲಾರದೆ ದೇವಾಲಯಗಳಿಗೆ ತೆರಳಿ ಮಳೆನಿಲ್ಲಲು ಪ್ರಾಥರ್ಿಸಿದ ನಿದರ್ಶನಗಳೂ ಇವೆ. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಮಳೆ ಸುರಿಯುವ ಪ್ರಮಾಣ ಕಡಿಮೆಯಾಗಿದ್ದು, ಪ್ರತಿವರ್ಷವೂ ಮಳೆ ಬರಲೆಂದು ಪ್ರಾಥರ್ಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಕಳೆದ ಕೆಲವರ್ಷಗಳಿಂದ ಜಿಲ್ಲೆಯ ಹಲವೆಡೆ ಸಮರ್ಪಕವಾಗಿ ಮಳೆಬಾರದೆ ಬರ ಕಾಣಿಸಿಕೊಂಡಿದೆ. ಅದರಲ್ಲೂ ಕಳೆದ ವರ್ಷವಂತು ಮಳೆ ಬಾರದೆ ಬರಕಾಣಿಸಿಕೊಂಡಿದ್ದರಿಂದ ನೀರಿನ ಕೊರತೆಯಿಂದ ಭತ್ತದ ಕೃಷಿಯನ್ನೇ ಮಾಡಿಲ್ಲ. ಈ ಬಾರಿಯಾದರೂ ಉತ್ತಮ ಮಳೆಯಾಗಿ ಬರ ನಿವಾರಣೆಯಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.