ಮಡಿಕೇರಿ: ನಗರದ ಇಸ್ಕಾನ್ ಶ್ರೀಜಗನ್ನಾಥ ಮಂದಿರದ ವತಿಯಿಂದ 10 ನೇ ವರ್ಷದ ಶ್ರೀಜಗನ್ನಾಥ ಸ್ವಾಮಿ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ನಗರದ ಪೇಟೆ ಶ್ರೀರಾಮಮಂದಿರ ದೇವಾಲಯದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ವೃಂದಾವನದ ಇಸ್ಕಾನ್ ಸಮಿತಿಯ ಉಪಾಧ್ಯಕ್ಷರಾದ ಭಕ್ತಿ ಆಶ್ರಯ ವೈಷ್ಣವ ಮಹಾರಾಜ್ ಭಕ್ತಿಯ ಮೂಲಕ ಆತ್ಮಶಕ್ತಿಯನ್ನು ಗಳಿಸಬಹುದೆಂದು ಅಭಿಪ್ರಾಯಪಟ್ಟರು. ಜೀವನದಲ್ಲಿ ಭಕ್ತಿ ಪ್ರಧಾನವಾಗಿರಬೇಕೆಂದು ಸಲಹೆ ನೀಡಿದರು.
ಪತ್ರಿಕೋದ್ಯಮಿ ಜಿ.ರಾಜೇಂದ್ರ ಮಾತನಾಡಿ, ಧರ್ಮನಿಷ್ಠೆ ಮತ್ತು ಭಕ್ತಿ ನಿಷ್ಠೆಯಿಂದ ಮುಕ್ತಿ ಸಾಧ್ಯವೆಂದು ಅಭಿಪ್ರಾಯಪಟ್ಟರು. ಭಕ್ತಿಯ ಮೂಲಕ ಭಗವಂತನಿಗೆ ಶರಣಾಗತಿಯಾಗುವುದರಿಂದ ಶಾಂತಿ ಹಾಗೂ ಸಹನೆಯನ್ನು ಹೊಂದಬಹುದೆಂದು ತಿಳಿಸಿದರು.
ಕೊಡವ ಸಮಾಜದ ಅಧ್ಯಕ್ಷರಾದ ಕೆ.ಎಸ್.ದೇವಯ್ಯ, ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶಾರದಾ ಮಂದಪ್ಪ, ಮಡಿಕೇರಿಯ ಇಸ್ಕಾನ್ ಶ್ರೀಜಗನ್ನಾಥ ಮಂದಿರದ ಅಧ್ಯಕ್ಷರಾದ ಸುಧೀರ್ ಚೈತನ್ಯ ದಾಸ್, ಪ್ರಮುಖರಾದ ತ್ರಿವಿಕ್ರಮದಾಸ್, ರಾಜಣ್ಣ, ಶಿವರಾಂ, ನಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಜಗನ್ನಾಥ ಸ್ವಾಮಿಯ ರಥಯಾತ್ರೆಯು ಪೇಟೆ ಶ್ರೀರಾಮಮಂದಿರದಿಂದ ಆರಂಭಗೊಂಡು ಗಣಪತಿ ಬೀದಿ, ಎ.ವಿ.ಶಾಲೆ, ಮಹದೇವಪೇಟೆ, ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನವನ್ನು ತಲುಪಿತು. ಭಕ್ತರು ರಥವನ್ನು ಎಳೆದು ಕೃಷ್ಣನಾಮ ಸ್ಮರಣೆ ಮಾಡಿದರು.
ಗಾಂಧಿ ಮೈದಾನದಲ್ಲಿ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಚನ ಹಾಗೂ ಕಿರು ನಾಟಕ ಭಕ್ತ ಪ್ರಹ್ಲಾದ ಪ್ರದರ್ಶನಗೊಂಡಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗವಾಯಿತು.