ಮಲೆನಾಡೆ ಹಾಗೆ ಒಂತರಾ ವಿಸ್ಮಯ..ಎಲ್ಲ ಕಾಲದಲ್ಲೂ ಮಲೆನಾಡು ತನ್ನ ಮೋಹಕ ಚೆಲುವನ್ನು ಹೊರಗೆಡಹುತ್ತದೆ.ಇದಕ್ಕೆ ಪುಷ್ಟಿ ಎಂಬಂತೆ ಮಲೆನಾಡಿನ ಗಡಿ ಭಾಗದಲ್ಲಿನ ಚಾರ್ಮಾಡಿ ಘಾಟಿ ಹಾಗೂ ಮಲಯಮಾರುತ ಪ್ರತಿ ಮಾಸದಲ್ಲಿ ತನ್ನ ನೈಜ ಸೊಬಗಿನಿಂದ ಕಂಗೊಳಿಸುತ್ತಿದೆ. ಆದರೆ ಒಂದು ಕಾಲದಲ್ಲಿ ಮಿನಿ ಊಟಿಯೆಂದು ಕರೆಯಿಕೊಂಡು ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿತ್ತು. ಆದ್ರೆ ಸರ್ಕಾರ ಪ್ರವಾಸಿಗರಿಗಾಗಿ ನಿರ್ಮಾಣ ಮಾಡಿದ ಪ್ರವಾಸಿ ಹೋಟೇಲ್ ಅರ್ಧಕ್ಕೆ ನಿಂತಿದೆ.
ಈಗ ಈ ಹೋಟೇಲ್ ಅನೈತಿಕ ಚಟುವಟಿಕೆ ತಾಣವಾಗಿದೆ. ಇಲ್ಲಿ ಹಾದು ಹೋಗುವ ಪ್ರವಾಸಿಗರಿಗೆ ಮೋಜು ಮಸ್ತಿಯ ತಾಣವಾಗಿದೆ ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…
ಹೌದು…ಸುತ್ತಲೂ ಹಚ್ಚಹಸಿರಿನ ಗಿರಿಗಳ ಸಾಲು, ತಿರುವು ಮುರುವಾದ ರಸ್ತೆಗಳು, ಗಗನ ಚುಂಬಿಸುವಷ್ಟು ಎತ್ತರಕ್ಕೆ ಬೆಳೆದು ನಿಂತ ಬೆಟ್ಟಗಳ ಸಾಲು, ಹಕ್ಕಿಗಳ ಚಿಲಿಪಿಲಿ ಕಲರವ, ಹೀಗೆಲ್ಲಾ ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವುದೇ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿ ಹಾಗೂ ಮಲಯ ಮಾರುತ. ಇಲ್ಲಿನ ಸೌಂದರ್ಯವನ್ನು ವರ್ಣೀಸುವುದೇ ಅಸಾಧ್ಯ.
ಒಂದು ಕಾಲದಲ್ಲಿ ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮನಸೋತು ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಮೂಡಿಗೆರೆ ಮಿಲ್ಲಪುರಂ ರಾಷ್ಟೀಯ ಹೆದ್ದಾರಿ ಪಕ್ಕದಲ್ಲೇ ಪ್ರವಾಸೋಧ್ಯಮ ಇಲಾಖೆ, ಪ್ರವಾಸಿಗರಿಗಾಗಿ ಕೋಟಿ ರೂ ವೆಚ್ಚದಲ್ಲಿ ಹೋಟೇಲ್ ನಿರ್ಮಾಣ ಮಾಡಿದೆ. ಆದರೆ ಈ ಹೋಟೇಲ್ ಅರ್ಧಕ್ಕೆ ನಿಂತಿದೆ. ಈಗ ಈ ಪ್ರವಾಸಿ ಹೋಟೇಲ್ ಕುಡುಕರ ಅಡ್ಡೆಯಾಗಿದೆ. ದಿನ ನಿತ್ಯ ಈ ಮಾರ್ಗದ ಮೂಲಕ ಹೋಗುವ ಪ್ರವಾಸಿಗರು ಇಲ್ಲಿ ಹೆಂಡದ ಪಾರ್ಟಿ ಮಾಡಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡಿಸಿದ್ದಾರೆ. ಇದರಿಂದಾಗಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಚಾರ್ಮಾಡಿ ಘಾಟಿಯ ವೈಭವವೇ ಹಾಗೆ. ಮಳೆಗಾಲ ಆರಂಭವಾದೊಡನೆ ಚಾರ್ಮಾಡಿ ಘಾಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಲಧಾರೆಗಳು ಕಂಡು ಬರುತ್ತಿವೆ. ಜೊತೆಗೆ ಸದಾಕಾಲ ದಟ್ಟ ಮಂಜಿನಿಂದ ಆವೃತವಾದ ಈ ಪ್ರದೇಶದಲ್ಲಿ ವಿಹರಿಸುವುದೇ ಒಂದು ಖುಷಿ. ಇದರ ಸವಿಯನ್ನು ಸವಿಯಲು ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಇಲ್ಲಿಗೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇವರಿಗಾಗಿಯೇ ನಿರ್ಮಾಣವಾದ ಪ್ರವಾಸಿ ಹೋಟೇಲ್ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಮಲಯ ಮಾರುತದ ವೈಭವ ಹಾಗೂ ಚಾರ್ಮುಡಿ ಘಾಟಿಯ ಸೌಂದರ್ಯವನ್ನ ಸವಿಯಲು ರಾಜ್ಯ ಮಾತ್ರವಲ್ಲ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸೋಧ್ಯಮದ ನಿರ್ಲಕ್ಷದಿಂದ ಅರ್ಧಕ್ಕೆ ನಿಂತ ಈ ಕಟ್ಟಡ ಸೂಕ್ತ ಭದ್ರತೆ ಇಲ್ಲದೆ ಅನೈತಿಕ ತಾಣವಾಗಿ ಮಾರ್ಪಟ್ಟಿದೆ.
ಒಟ್ಟಾರೆಯಾಗಿ ಪ್ರವಾಸಿಗರ ಸ್ವರ್ಗ, ಮಿನಿ ಊಟಿಯೆಂಬ ಖ್ಯಾತಿಗೆ ಪಾತ್ರವಾಗಿರುವ ಮೂಡಗೆರೆಯ ಕೊಟ್ಟಿಗೆ ಹಾರದಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರವಾಸಿ ಹೋಟೇಲ್ ಗೆ ಕಾಯಕಲ್ಪದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ಪ್ರವಾಸೋಧ್ಯಮ ಇಲಾಖೆ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಬೇಕಿದೆ. ಆ ಮೂಲಕ ಖಾಸಗೀ ಹೋಟೇಲಗಳ ದುಪ್ಪಟ್ಟು ಬೆಲೆಗೆ ಕಡಿವಾಣ ಹಾಕಿ ಇನ್ನಷ್ಟು ಪ್ರವಾಸಿಗರು ಈ ಭಾಗದ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ಅನುವು ಮಾಡಿಕೊಡಬೇಕಿದೆ…