ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಹಾಕಿ ಉತ್ಸವವಾದ ಬಿದ್ದಾಟಂಡ ಹಾಕಿ ನಮ್ಮೆಯು ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡಿತು.
ಅರ್ಜುನ ಪ್ರಶಸ್ತಿ ವಿಜೇತರಾದ ಹಾಕಿ ಕ್ರೀಡಾಪಟು ಎ.ಬಿ.ಸುಬ್ಬಯ್ಯ ಅವರು ದೀಪ ಬೆಳಗುವ ಮೂಲಕ ಬಿದ್ದಾಟಂಡ ಹಾಕಿ ನಮ್ಮೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಮಾತನಾಡಿ ಕೊಡಗಿನ ಹಾಕಿ ಉತ್ಸವ ವರ್ಷದಿಂದ ವರ್ಷಕ್ಕೆ ಹಬ್ಬದ ರೀತಿಯಲ್ಲಿ ನಡೆಯುತ್ತಿದ್ದು, ಪ್ರತಿವರ್ಷವೂ ಲಕ್ಷಾಂತರ ರೂ. ಖರ್ಚು ಮಾಡಿ ಗ್ಯಾಲರಿ ನಿರ್ಮಿಸಲಾಗುತ್ತಿದ್ದು, ಇದನ್ನು ತಡೆಯಲು ಶಾಶ್ವತ ಗ್ಯಾಲರಿಯ ಅವಶ್ಯಕತೆಯಿರುವುದಾಗಿ ಹೇಳಿದರು.
ಗ್ರೀಸ್ ರಾಷ್ಟ್ರದಲ್ಲಿ ಒಲಂಪಿಕ್ಸ್ ಆರಂಭವಾದಂತೆ ಕೊಡಗಿನಲ್ಲಿಯೂ ಸಹ ಹಾಕಿ ಕ್ರೀಡೆ ಜನ್ಮ ತಾಳಿದೆ. ಹಾಕಿ ಉತ್ಸವಕ್ಕಾಗಿ ಕ್ರೀಡಾ ಇಲಾಖೆಯಿಂದ ಪ್ರತೀ ವರ್ಷ 50 ಲಕ್ಷ ರೂ. ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ಕೊಡವ ಕುಟುಂಬಗಳ ಹಾಕಿ ನಮ್ಮೆ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೆಚ್ಚು ಹೆಚ್ಚು ತಂಡಗಳು ಭಾಗವಹಿಸುತ್ತಿವೆ. ಇದು ಯುವಜನರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಹಾಗೂ ಹಾಕಿ ಕ್ರೀಡೆಯನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ಅವರು ಹೇಳಿದರು.
ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಜಿಲ್ಲೆಯಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಸಂಸದರ ಅನುದಾನದಡಿ ಸಹಕಾರ ನೀಡಲಾಗುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರು ಬಿದ್ದಾಟಂಡ ಹಾಕಿ ನಮ್ಮೆಯಲ್ಲಿ ಹಾಕಿ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಾಕಿ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಬಿದ್ದಾಟಂಡ ಎಸ್.ತಮ್ಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡವ ಹಾಕಿ ನಮ್ಮೆ 27 ದಿನಗಳ ಕಾಲ ನಡೆಯಲಿದ್ದು, 306 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಜಿ.ಪಂ.ಸದಸ್ಯರಾದ ಮುರುಳಿ ಕರುಂಬಮ್ಮಯ್ಯ, ನಾಪೋಕ್ಲು ಗ್ರಾ.ಪಂ.ಅಧ್ಯಕ್ಷರಾದ ಇಸ್ಮಾಯಿಲ್, ಕ್ರೀಡಾಪಟು ಕೆ.ಕಾಳಯ್ಯ, ಇತರರು ಇದ್ದರು.
ಸಭಾ ಕಾರ್ಯಕ್ರಮದ ನಂತರ ಪಾಂಡಂಡ ಕುಟ್ಟಪ್ಪ ಅವರು ಗೋಲು ಹೊಡೆಯುವ ಮೂಲಕ ಹಾಕಿ ಉತ್ಸವಕ್ಕೆ ಚಾಲನೆ ನೀಡಿದರು.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನ ಮಿಲಿಟರಿ ಬ್ಯಾಂಡ್ ವತಿಯಿಂದ ನಡೆದ ಕಾರ್ಯಕ್ರಮ ಗಮನ ಸೆಳೆಯಿತು. ನಿರ್ಮಲ ಬೋಪಣ್ಣ ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು. ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾದ ರಮೇಶ್ ಚಂಗಪ್ಪ ಅವರು ಸ್ವಾಗತಿಸಿದರು.