ಮಡಿಕೇರಿ: ದೆಹಲಿಯ ಕರ್ನಾಟಕ ಸಂಘದಲ್ಲಿ ಏ.23ರಂದು ಕೊಡವ-ಅರೆಭಾಷೆ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆಭಾಷೆ ಸಂಭ್ರಮ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತದೆ ಎಂದು ಟ್ರಸ್ಟ್ ನ ಸಲಹೆಗಾರರಾದ ಕೆದಂಬಾಡಿ ಕಾಂಚನ ಕೀರ್ತನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆಭಾಷೆ ಗೌಡರ ಆಚಾರ-ವಿಚಾರಗಳನ್ನು ಪ್ರದರ್ಶನ ಕಲೆಯಾಗಿ ಮೊಟ್ಟಮೊದಲ ಬಾರಿಗೆ ವೇದಿಕೆಗೆ ತಂದ ಕೀರ್ತಿ ತಮ್ಮ ಟ್ರಸ್ಟ್ ನದ್ದಾಗಿದ್ದು, ಇದುವರೆಗೂ ಸುಮಾರು 18 ಪ್ರದರ್ಶನಗಳನ್ನು ನೀಡಲಾಗಿದೆ ಎಂದರು.
ದೆಹಲಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ಎರಡನೇ ಕಾರ್ಯಕ್ರಮ ಇದಾಗಿದೆ. ಸುಮಾರು 65 ರಿಂದ 70 ಕಲಾವಿದರು ನೀಡುವ ಈ ಕಾರ್ಯಕ್ರಮವನ್ನು ವೇದಿಕೆಗೆ ಅನುಗುಣವಾಗಿ 15 ರಿಂದ 30 ಮಂದಿಗೆ ಸೀಮಿತಗೊಳಿಸಿಯೂ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಪ್ರಾರಂಭದಲ್ಲಿ 22 ನಿಮಿಷಗಳಷ್ಟಿದ್ದ ಈ ಕಾರ್ಯಕ್ರಮ ಹಲವಾರು ಬದಲಾವಣೆ ಮತ್ತು ಹೊಸ ಪ್ರಕಾರಗಳ ಸೇರ್ಪಡೆಯೊಂದಿಗೆ ಇದೀಗ ವಿಸ್ತರಣೆಗೊಂಡಿದೆ ಎಂದು ಕಾಚನ ಕೀರ್ತನ್ ತಿಳಿಸಿದರು.
ಪ್ರಸಕ್ತ ದೆಹಲಿಯಲ್ಲಿ ಪ್ರಸ್ತುತಪಡಿಸಲಿರುವ ಕಾರ್ಯಕ್ರಮದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಾಂಧವರ ಆಚರಣೆ, ಸಂಪ್ರದಾಯಗಳನ್ನು ಪ್ರದರ್ಶನ ಕಲೆಯಾಗಿ ವೇದಿಕೆಗೆ ತರಲಾಗುತ್ತಿದೆ. ಸುಮಾರು 40 ನಿಮಿಷಗಳ ಕಾರ್ಯಕ್ರಮವನ್ನು ಹಲವು ಹೊಸತನಗಳ ಸೇರ್ಪಡೆಯೊಂದಿಗೆ ಆಯೋಜಕರ ಕೋರಿಕೆಯ ಮೇರೆಗೆ ತುಳು ಹಾಗೂ ಅರೆಭಾಷೆ ಸಹಿತ ಒಂದು ಗಂಟೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ 20 ವರ್ಷಗಳಿಂದ ಭಾಗಮಂಡಲ ಗ್ರಾಮದಲ್ಲಿ ಮಿಲನ ನೃತ್ಯ ಬಳಗವಾಗಿ ಪ್ರಾರಂಭವಾದ ಈ ಕಲಾತಂಡ ಮೂರು ವರ್ಷಗಳಿಂದ ಅಭಿನಯ ಕಲಾಮಿಲನ ಚಾರಿಟೇಬಲ್ ಟ್ರಸ್ಟ್ ಆಗಿ ಬೆಳೆದು ನಿಂತಿದೆ. ವಿವಿಧ ಕಲಾ ಪ್ರಕಾರಗಳನ್ನು ನೃತ್ಯ ಪ್ರದರ್ಶನವನ್ನು ನೀಡುತ್ತಿದ್ದು, ಈ ಬಳಗದಲ್ಲಿ ಗ್ರಾಮೀಣ ಪ್ರತಿಭಾವಂತ ಮಕ್ಕಳಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹವ್ಯಾಸಿ ಕಲಾವಿದರಿದ್ದು, ದೆಹಲಿಯ ಕಾರ್ಯಕ್ರಮದಲ್ಲಿ 30 ಮಂದಿ ಕಲಾವಿದರು ಕಲಾಪ್ರದರ್ಶನ ನೀಡಲಿದ್ದಾರೆ ಎಂದು ಕಾಂಚನ ತಿಳಿಸಿದರು.
ದೆಹಲಿ ಕರ್ನಾಟಕ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಬ್ರಿಜೇಶ್ ಕಾಳಪ್ಪ ಅವರು ಉದ್ಘಾಟಿಸಲಿದ್ದು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಸಂಘಟಕ ದೇವಂಗೇರಿ ಹರೀಶ್ ಹಾಗೂ ದೆಹಲಿ ಕೊಡವ ಸಮಾಜದ ಅಧ್ಯಕ್ಷ ಎಂ.ಕಾರ್ಯಪ್ಪ ಅಪ್ಪಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಮಿಲನ ಭರತ್ ಹಾಗೂ ಕೆದಂಬಾಡಿ ಕಾಂಚನ ಕೀರ್ತನ್ ನಿರ್ದೇಶಿಸುತ್ತಿದ್ದು, ಸುಳ್ಯದ ಡಾ. ಮೌಲ್ಯ ಜೀವನ್ರಾಂ ಹಾಡುಗಳನ್ನು ಕುದುಕುಳಿ ಜೆ.ಭರತ್ ಅವರು ಸಾಹಿತ್ಯ ರಚಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆ.ಜೆ.ಭರತ್, ಹೆಲೆನ್ ಭರತ್ ಹಾಗೂ ಪೊನ್ನಚನ ಪವನ್ ಹಾಜರಿದ್ದರು.