ಗುಂಡ್ಲುಪೇಟೆ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಪ್ರಕರಣ ಬೇಧಿಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ತಾಲೂಕಿನ ದೊಡ್ಡತುಪ್ಪೂರು ಗ್ರಾಮದ ಲೋಕೇಶ್ ಎಂಬಾತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಮದುವೆಯಾಗುವುದಾಗಿ ನಂಬಿಸಿ ತಮ್ಮ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ನಂಜನಗೂಡು ತಾಲೂಕಿನ ಗ್ರಾಮದ ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟಿದ್ದ. ಈ ಯುವತಿ ಪಟ್ಟಣದ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿಗೆ ತೆರಳಿದ್ದ ಮಗಳು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನೆಯಾಗದೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಬಗ್ಗೆ ಯುವತಿಯ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಅಪಹರಣ ಮಾಡಿದ್ದ ಯುವಕನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ನೀಡಿದ್ದಾರೆ. ಯುವಕನ ವಿರುದ್ದ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.