ಚಾಮರಾಜನಗರ: ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮಳೆಯಾಗಿರುವುದರಿಂದ ರೈತರು ಉಳುಮೆ ಕಾರ್ಯದಲ್ಲಿ ನಿರತರಾಗಿದ್ದು, ಬಿತ್ತನೆ ಕಾರ್ಯ ಕೈಗೊಳ್ಳಲು ಮುಂದಾಗಿದ್ದರೂ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಒದಗಿಸದ ಕಾರಣದಿಂದ ಪರದಾಡುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಗುಂಡ್ಲುಪೇಟೆ ತಾಲೂಕಿನ ಬೇಗೂರು ತೆರಕಣಾಂಬಿ ಹಾಗೂ ಕಸಬಾ ಹೋಬಳಿಗಳಲ್ಲಿ ಸಾಧಾರಣ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದಾಗಿ ರೈತರು ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಬಿತ್ತನೆ ಕಾರ್ಯ ಮುಗಿಸಿದರೆ ಮುಂದೆ ಮಳೆ ಸುರಿದರೆ ಉತ್ತಮವಾಗುತ್ತದೆ ಎಂಬುದು ಅವರ ಆಲೋಚನೆಯಾಗಿದೆ. ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಿದ್ದರೂ ಇದೀಗ ಕೃಷಿ ಇಲಾಖೆಯು ರೈತರಿಗೆ ಬೇಕಾದ ಬಿತ್ತನೆ ಬೀಜವನ್ನು ಮಾರಾಟ ಮಾಡಲು ಮುಂದಾಗದೆ ಇರುವುದರಿಂದ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಖರೀದಿ ಮಾಡಬೇಕಾಗಿದೆ. ಕಡಿಮೆ ಇಳುವರಿ ಬರುತ್ತದೆಂಬ ಕಾರಣದಿಂದ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ನೀಡುತ್ತಿರುವ ಬೀಜಗಳನ್ನು ಕೊಳ್ಳಲು ರೈತರು ಮುಂದಾಗುತ್ತಿಲ್ಲ.
ಇದುವರೆಗೆ ಗಂಗಾಕಾವೇರಿ ಬೀಜಗಳನ್ನು ಬಿತ್ತನೆ ಮಾಡಿ ಅಧಿಕ ಇಳುವರಿ ಪಡೆದುಕೊಂಡಿರುವ ರೈತರು ಕೃಷಿ ಇಲಾಖೆಯು ನೀಡುತ್ತಿರುವ ಕೃಷಿ ವಿಶ್ವವಿದ್ಯಾನಿಲಯದ ಕೆಬಿಎಸ್ 44 ತಳಿಯ ಬೀಜಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಮಣ್ಣಿನ ಗುಣಕ್ಕೆ ಸರಿಯಾಗಿ ಹೊಂದಿಕೆಯಾಗದೆ ಬರವನ್ನು ಸಹಿಸದೆ ಹೆಚ್ಚಿನ ಇಳುವರಿ ನೀಡುವುದಿಲ್ಲ ಎಂಬ ಕಾರಣದಿಂದ ಇದನ್ನು ರೈತರು ನಿರಾಕರಿಸುತ್ತಿದ್ದಾರೆ. ಕೃಷಿ ಇಲಾಖೆಯ ಗೋದಾಮಿನಲ್ಲಿ 250ಟನ್ ಗಂಗಾ ಕಾವೇರಿ ಬೀಜಗಳನ್ನು ಸಂಗ್ರಹಿಸಿಟ್ಟಿದ್ದರೂ ಇದಕ್ಕೆ ಸರ್ಕಾರ ಸಬ್ಸಿಡಿ ದರ ನಿಗದಿಪಡಿಸದ ಪರಿಣಾಮ ಮಾರಾಟ ಮಾಡಲಾಗುತ್ತಿಲ್ಲ. ಸರ್ಕಾರ ಸಬ್ಸಿಡಿ ದರ ನಿಗದಿಸಿದರೆ ಈ ಕೂಡಲೇ ಬೀಜವನ್ನು ಮಾರಾಟ ಮಾಡುವುದಾಗಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಿತ್ತನೆಗೆ ಸಕಾಲವಾಗಿದ್ದು, ಸರ್ಕಾರ ಈಗಾಗಲೇ ತೀಮರ್ಾನ ಕೈಗೊಂಡು ರೈತರಿಗೆ ಬಿತ್ತನೆ ಬೀಜ ಒದಗಿಸಬೇಕಾಗಿದೆ. ಆದರೆ ಇನ್ನೂ ಸಬ್ಸಿಡಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳದ ಕಾರಣ ರೈತರು ಅದನ್ನೇ ಕಾಯುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಿಂದ ದುಬಾರಿ ಬೆಲೆ ತೆತ್ತು ಬಿತ್ತನೆ ಮಾಡಲು ಮುಂದಾಗಿದ್ದಾರೆ.
ಸರ್ಕಾರ ಸಬ್ಸಿಡಿ ದರ ನಿಗದಿಗೊಳಿಸಿ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ಮಾರಾಟ ಮಾಡಲು ಮುಂದಾಗಲಿ ಎಂಬುದು ಈ ವ್ಯಾಪ್ತಿಯ ರೈತ ಮುಖಂಡರ ಮನವಿಯಾಗಿದೆ. ಸರ್ಕಾರದ ಜನಪ್ರತಿನಿಧಿಗಳ ಕಿವಿಗೆ ಇದು ತಟ್ಟುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.