ಬನ್ನೂರು: ಜಮೀನೊಂದರ ಬಳಿ ಯಾರೋ ದುಷ್ಕರ್ಮಿಗಳು ವ್ಯಕ್ತಿಯೊರ್ವನ ಮರ್ಮಾಂಗಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಮಾಡಿರುವ ಘಟನೆ ಬನ್ನೂರಿನ ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿಯ ವೇಳೆಯಲ್ಲಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಪಟ್ಟಣದ ಸಮೀಪದಲ್ಲಿರುವ ಬೇವಿನಹಳ್ಳಿ ಗ್ರಾಮದ ನಿವಾಸಿ ಮಾದೇಗೌಡ ಎಂಬುವರ ಪುತ್ರ ಕೃಷ್ಣ ಅಲಿಯಾಸ್ ಎಂ.ಕೆ. ರಾಜೇಂದ್ರ (35) ಎಂದು ಕೊಲೆಯಾದ ದುರ್ದೈವಿ. ಇವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ 9.30ರ ವೇಳೆಯಲ್ಲಿ ಇವರ ಮೊಬೈಲ್ ಗೆ ಕರೆಯೊಂದು ಬಂದಿದ್ದು, ಹಳೆಯ ಬಾಕಿ ವಸೂಲಾತಿ ಇದೆ ಈಗ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಕೃಷ್ಣ ಮನೆಯಿಂದ ಹೊರ ಹೋಗಿದ್ದರು ಎನ್ನಲಾಗಿದೆ. ಮನೆಯಿಂದ ಹೊರಬಂದ ಕೃಷ್ಣ ಮಧ್ಯರಾತ್ರಿ 1 ಗಂಟೆಯಾದರೂ ಮನೆಗೆ ಹಿಂದಿರುಗದೇ ಹೋದ ಸಂದರ್ಭದಲ್ಲಿ ಮನೆಯವರಿಗೆ ಗಾಬರಿಯಾಗಿದ್ದು, ಕೃಷ್ಣನನ್ನು ಹುಡುಕಲು ಆರಂಭಿಸಿದರು ಎನ್ನಲಾಗಿದೆ. ಎಷ್ಟೇ ಹುಡುಕಿದರೂ ಕೃಷ್ಣನ ಸುಳಿವು ಸಿಗಲಿಲ್ಲ. ನಂತರ ಗುರುವಾರ ಮುಂಜಾನೆ 6 ಗಂಟೆಯ ವೇಳೆಯಲ್ಲಿ ಅವರ ಭಾವ ನಿಂಗೇಗೌಡನ ಜಮೀನಿನ ಬಳಿ ಏನೋ ಬಿದ್ದಿರುವಂತೆ ಕಂಡಾಗ ಹತ್ತಿರ ಹೋಗಿ ನೋಡಿದ್ದಾರೆ. ಅಲ್ಲಿ ಕೃಷ್ಣ ಶವವಾಗಿ ಬಿದ್ದಿರುವುದು ಗೋಚರಿಸಿದೆ.
ಕೃಷ್ಣರ ಮರ್ಮಾಂಗವನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಕಂಡು ಬಂದಿದೆ. ಮೃತ ಕೃಷ್ಣನ ಮನೆಯವರು ನೀಡಿದ ದೂರಿನ ಮೇರೆಗೆ ಬನ್ನೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬನ್ನೂರು ಠಾಣೆ ಪೊಲಿಸರು ತನಿಖೆಯನ್ನು ಆರಂಭಿಸಿದ್ದಾರೆ.