ಗುಂಡ್ಲುಪೇಟೆ: ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಸುತ್ತಿರುವ 32 ಶಾಲೆಗಳು ಸೇರಿ 184 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಪ್ರೌಢಶಾಲೆಗಳು ಹಾಗೂ ವಿದ್ಯಾಗಳ ಹಾಜರಾತಿ ಕಡಿಮೆಯಿರುವ ಪಟ್ಟಣದಲ್ಲಿನ ಕೆಲವು ಶಾಲೆಗಳಲ್ಲಿ ಮಾತ್ರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್ ಹೇಳಿದ್ದಾರೆ.ಬರಪೀಡಿತ ತಾಲೂಕಾದ ಗುಂಡ್ಲುಪೇಟೆ ತಾಲೂಕಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 223 ಕಿರಿಯ ಹಿರಿಯ ಹಾಗೂ ಪ್ರೌಢಶಾಲೆಗಳಿವೆ. 10 ಮಕ್ಕಳಿಗಿಂತ ಕಡಿಮೆಯಿರುವ 39 ಶಾಲೆಗಳಲ್ಲಿ ಬಿಸಿಯೂಟ ತಯಾರಿಸದೆ ಸಮೀಪದ ಶಾಲೆಗಳಲ್ಲಿ ಈ ವಿದ್ಯಾರ್ಥಿಗಳಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿರುವುದು ಕಂಡು ಬಂದಿದೆ.
ಒಟ್ಟು 16,846 ವಿದ್ಯಾರ್ಥಿಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಜೆಯ ಅವಧಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಬರುವ ಮನಸ್ಸು ಮಾಡುತ್ತಿಲ್ಲ. 6,500 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ಒದಗಿಸುವ ಗುರಿ ಹೊಂದಿದ್ದರೂ ಗರಿಷ್ಟ 5,500 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದು ಶೇ.84 ಗುರಿ ಸಾಧಿಸಲಾಗಿದೆ. ತಾಲೂಕಿನ ಕೊಡಸೋಗೆ ಹಾಗೂ ಕೋಡಹಳ್ಳಿ ಗ್ರಾಮಗಳಲ್ಲಿ ಮನವಿ ಮಾಡಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಮಾತ್ರ ಬಿಸಿಯೂಟ ಯೋಜನೆಗೆ ಸಮರ್ಪಕ ನೀರು ನೀಡುತ್ತಿಲ್ಲ. ಉಳಿದಂತೆ ಎಲ್ಲ ಶಾಲೆಗಳಲ್ಲಿಯೂ ನೀರು ಸರಬರಾಜು ಮಾಡಲಾಗುತ್ತಿದೆ. ಹಿಂದುಳಿದ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ತಾಲೂಕಿನ ಸೋಮನಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಉತ್ತಮ ನೀರು ಸರಬರಾಜಾಗಿದೆ. ಎಲ್ಲ್ಲ ಮಕ್ಕಳಿಗೂ ಫಿಲ್ಟರ್ ನೀರನ್ನೇ ಕಾಯಿಸಿ ಕೊಡಲಾಗುತ್ತಿದೆ. ಊಟಕ್ಕೆ ಮೊದಲು ಹಾಗೂ ನಂತರ ಕೈತೊಳೆಯಲು ನಲ್ಲಿಯ ವ್ಯವಸ್ಥೆಯಿದೆ. ಶಾಲೆಗೆ ರಜೆಯಿರುವುದರಿಂದ 60 ವಿದ್ಯಾರ್ಥಿಗಳಲ್ಲಿ 30 ಮಾತ್ರ ಮಧ್ಯಾಹ್ನದ ಬಿಸಿಯೂಟದ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.