ಗುಂಡ್ಲುಪೇಟೆ: ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಉದ್ಯಮಿಯೇ ಸ್ವಂತ ಖರ್ಚಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಿರುವುದು ಸಮೀಪದ ಬೇಗೂರು ಗ್ರಾಮದಲ್ಲಿ ನಡೆದಿದೆ.
ಬೇಗೂರಿನ ನಿವಾಸಿ ರಾಜೇಶ್ಅರಸು ಎಂಬುವರು ಗ್ರಾಮಪಂಚಾಯಿತಿಯ ನಿರ್ಲಕ್ಷ್ಯದಿಂದ ಬೇಸತ್ತು ಚರಂಡಿ ಶುಚಿತ್ವ ಮಾಡಿದವರಾಗಿದ್ದಾರೆ. ಇವರು ಬೇಗೂರು ಗ್ರಾಮಪಂಚಾಯಿತಿ ಕಾರ್ಯಾಲಯದ ಸಮೀಪದಲ್ಲಿಯೇ ವಾಣಿಜ್ಯ ಸಂಕೀರ್ಣ ಹಾಗೂ ಮನೆಯಯನ್ನು ಹೊಂದಿದ್ದಾರೆ. ಗ್ರಾಪಂಗೆ ವಾರ್ಷಿಕ 18 ಸಾವಿರ ರೂಪಾಯಿಗಳ ತೆರಿಗೆಯನ್ನೂ ಕಟ್ಟುತ್ತಿದ್ದಾರೆ. ಆದರೆ ಇವರ ಕಟ್ಟಡದ ಮುಂಭಾದಲ್ಲಿರುವ ಚರಂಡಿಯಲ್ಲಿ ಭಾರೀ ಪ್ರಮಾಣದ ಹೂಳು ತುಂಬಿಕೊಂಡು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಇದರ ಹೂಳೆತ್ತಿಸಿ ಕೊಳಚೆ ನೀರು ನಿಲ್ಲದಂತೆ ಮಾಡಿಕೊಡುವಂತೆ ಹಲವಾರು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿರಲಿಲ್ಲ.
ಈಗಾಗಲೇ ಮಳೆಯಾಗುತ್ತಿದ್ದು, ಇನ್ನು ಮಳೆಗಾಲದಲ್ಲಿ ಮಳೆ ಸುರಿದರೆ ಚರಂಡಿಯಲ್ಲಿ ಹೂಳು ತುಂಬಿರುವುದರಿಂದ ನೀರು ಹರಿಯಲು ಕಷ್ಟವಾಗುವುದರಿಂದ ಅಷ್ಟೇ ಅಲ್ಲದೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ಕಟ್ಟಡದೊಳಗೆ ಹರಿಯುವ ಸಾಧ್ಯತೆಯಿರುವುದರಿಂದ ಗ್ರಾಮಪಂಚಾಯಿತಿ ನೌಕರರನ್ನು ಕರೆಯಿಸಿ ಹೂಳು ತೆಗೆಯುವ ಯಾವ ಲಕ್ಷಣವೂ ಕಂಡು ಬಾರದ್ದರಿಂದ ತಾವೇ ಸ್ವಂತ ಖರ್ಚಲ್ಲಿ ಹೂಳು ತೆಗೆಸಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ಹೂಳು ತೆಗೆಯದೆ ಚರಂಡಿಯಲ್ಲಿದ್ದ ತ್ಯಾಜ್ಯವೆಲ್ಲ ಕಟ್ಟಡದೊಳಗೆ ಬಂದಿತ್ತು. ಈ ಬಾರಿಯೂ ಇದು ಪುನರಾವರ್ತನೆಯಾಗುವ ಲಕ್ಷಣ ಇದ್ದುದರಿಂದ ಮಳೆ ಆರಂಭದ ಮುನ್ನವೇ ಹೂಳು ತೆಗೆಯಿಸಿ ಎಂದು ಗ್ರಾಪಂಗೆ ಮನವಿ ಮಾಡಿದ್ದರು. ಆದರೆ ಮನವಿಗೆ ಗ್ರಾಪಂ ಮಾತ್ರ ಸೊಪ್ಪು ಹಾಕಿರಲಿಲ್ಲ. ಹೀಗಾಗಿ ಮುಂದೆ ಮಳೆ ಬಂದು ಅನಾಹುತ ಸಂಭವಿಸುವ ಮುನ್ನವೇ ತಾವೇ ಸ್ವಂತ ಖರ್ಚಿನಿಂದ ಚರಂಡಿಯನ್ನು ಸ್ವಚ್ಛಗೊಳಿಸಿದ್ದಾರೆ.