ಸುಂಟಿಕೊಪ್ಪ: ಪಾನಮತ್ತನಾದ ವ್ಯಕ್ತಿಯೋರ್ವ ಪಟ್ಟಣದಲ್ಲಿ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿಕೊಂಡು ಸಾರ್ವಜನಿಕರಲ್ಲಿ ಭಯದ ವಾತವರಣ ಸೃಷ್ಟಿಸಿದ ಘಟನೆ ನಡೆದಿದ್ದು, ಪೊಲೀಸರ ಸಮಯೋಚಿತ ಕರ್ತವ್ಯ ಪ್ರಜ್ಞೆಯಿಂದ ಆತನನ್ನು ಬಂಧಿಸಲಾಗಿದೆ.
ಇಲ್ಲಿನ ಪಟ್ಟಣದ ಹೃದಯ ಭಾಗದ ಮದ್ಯದಂಗಡಿ ಮುಂದೆ ಗುರುವಾರ ಮಧ್ಯರಾತ್ರಿ ರಾತ್ರಿ 9.30 ಗಂಟೆಗೆ ಅಂದಗೋವೆಯ ಚಿಕ್ಕಂಡ.ಎ.ವಸಂತ(34) ಎಂಬಾತ ಪಾನಮತ್ತನಾಗಿ ತನ್ನ ಸ್ವಾಧೀನದಲ್ಲಿದ್ದ ಜಮ್ಮಾ ಬೈರೇಸ್ನ ಡಬಲ್ ಬ್ಯಾರಲ್ ಕೋವಿಯಿಂದ ಗಾಳಿಯಲ್ಲಿ ಪೊಲೀಸರ ಮುಂದೆಯೇ ಒಂದು ಸುತ್ತು ಗುಂಡು ಹಾರಿಸಿದ್ದಾನೆ.
ಅಲ್ಲಿದ್ದ ಸಾರ್ವಜನಿಕರು ಆಟೋಚಾಲಕರು ಇದೇನೆಂದು ಭಯಭೀತರಾಗಿ ಎದ್ದು ಬಂದು ನೋಡಿದಾಗ ವಸಂತ ಪಾನಮತ್ತನಾಗಿ ಮತ್ತೆ ಗುಂಡು ಹಾರಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಭಯಗೊಂಡ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದು, ಠಾಣಾಧಿಕಾರಿ ಹೆಚ್.ಎಸ್. ಬೋಜಪ್ಪ ಹಾಗೂ ಸಿಬ್ಭಂದಿ ಸ್ಥಳಕ್ಕೆ ಧಾವಿಸಿ ಬಂದು ಕೋವಿಯಿಂದ ಗುಂಡು ಹಾರಿಸಿ ಸಾರ್ವಜನಿಕರಿಗೆ ಭಯದ ಅತಂಕ ಸೃಷ್ಟಿಸಿದ ಆರೋಪಿ ವಸಂತನನ್ನು ವಶಕ್ಕೆ ಪಡೆದುಕೊಂಡು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.