ಹನೂರು: ಜಾನುವಾರುಗಳಿಗೆ ಹಾಕಲು ಸಂಗ್ರಹಿಸಿಟ್ಟಿದ್ದ ಜೋಳದ ಕಡ್ಡಿಯ ಮೇವಿಗೆ ಮಳೆಯ ನೀರು ಸೇರಿ ಕೊಳೆತು ದುರ್ನಾತ ಬೀರುತ್ತಿರುವುದರಿಂದ ಜಾನುವಾರುಗಳು ಸೇವಿಸದೆ ನಷ್ಟವುಂಟಾಗಿರುವ ಘಟನೆ ಹನೂರು ಪಟ್ಟಣದ ಆರ್ ಎಂಸಿ ಆವರಣದಲ್ಲಿ ತೆರೆದಿರುವ ಗೋಶಾಲೆಯಲ್ಲಿ ನಡೆದಿದೆ.
ಬರದ ಹಿನ್ನಲೆಯಲ್ಲಿ ಹನೂರು ಆರ್ ಎಂಸಿ ಆವರಣದಲ್ಲಿ ರೈತರ ಒತ್ತಾಯದ ಮೇರೆಗೆ ಗೋಶಾಲೆಯನ್ನು ತೆರೆಯಲಾಗಿತ್ತು. ಬರಪೀಡಿದ ಗ್ರಾಮಗಳ ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಟ್ಟಿದ್ದರು. ಈ ಜಾನುವಾರುಗಳಿಗೆ ಹಾಕಲೆಂದು ಜೋಳದ ಕಡ್ಡಿಯ ಮೇವನ್ನು ಗೋಶಾಲೆಯ ಆವರಣದಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ದಿಢೀರ್ ಮಳೆ ಸುರಿದಿದ್ದು ಮಳೆಯ ನೀರು ಮೇವಿನ ರಾಶಿಯೊಳಗೆ ಸೇರಿಕೊಂಡು ಅಲ್ಲಿಯೇ ಕೊಳೆಯಲಾರಂಭಿಸಿದ್ದು ದುರ್ವಾಸನೆ ಬೀರುತ್ತಿದೆ. ಇದೀಗ ಈ ಮೇವನ್ನು ಜಾನುವಾರುಗಳಿಗೆ ಹಾಕಿದರೂ ಅವು ತಿನ್ನುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಲಕ್ಷಾಂತರ ರೂ ಖರ್ಚು ಮಾಡಿ ಸಂಗ್ರಹಿಸಿಟ್ಟಿದ್ದ ಮೇವು ನಷ್ಟವಾಗುವ ಸಾಧ್ಯತೆ ಹೆಚ್ಚಾಗಿದೆ.
ಬಹುಶಃ ಮೇವಿನ ರಾಶಿಯನ್ನು ಮುಚ್ಚಿಟ್ಟಿದ್ದರೆ ನೀರು ಸೇರುತ್ತಿರಲಿಲ್ಲವೇನೋ? ಆದರೆ ಆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ಬರಲಿಲವೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ ಒಟ್ಟಾರೆ ಇದೀಗ ಸಮಸ್ಯೆ ನಿರ್ಮಾಣವಾಗಿದ್ದು, ರೈತರು ಮೇವು ಹಾಳಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಮಳೆ ನೀರಿನಿಂದ ಕೊಳೆತು ದುರ್ವಾಸನೆ ಬೀರುತ್ತಿರುವ ಮೇವನ್ನು ಜಾನುವಾರುಗಳಿಗೆ ಹಾಕಿದರೆ ಆರೋಗ್ಯ ಹದಗೆಡಬಹುದು ಆದ್ದರಿಂದ ಅದನ್ನು ಹಾಕದೆ ಹೊಸ ಮೇವನ್ನು ತರಿಸಿ ಹಾಕಿ ಎಂಬ ಒತ್ತಾಯವನ್ನು ಮಾಡುತ್ತಿದ್ದಾರೆ.
ಮತ್ತೊಂದೆಡೆ ಹನೂರು ವ್ಯಾಪ್ತಿಯ ಹಲವು ಗ್ರಾಮಗಳಿಗೆ ಪಶುವೈದ್ಯಕೀಯ ಇಲಾಖೆ ವತಿಯಿಂದ ಪುಡಿ ಮೇವನ್ನು ವಿತರಿಸಲಾಗುತ್ತಿದೆ. ಈಗಾಗಲೇ ಕಳೆದ ಆರು ದಿನಗಳಿಂದ ಮೇವು ವಿತರಣೆ ಮಾಡಲಾಗುತ್ತಿದ್ದು, ಸುಮಾರು 48 ಟನ್ ಪುಡಿ ಮೇವುಗಳನ್ನು ಮೇವು ನಿಧಿಯಿಂದ ವಿತರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಮಳೆ ಬಂದಿದ್ದರಿಂದ ಮೇವು ಕೊರತೆ ನೀಗಬಹುದು ಎಂಬ ಆಶಾಭಾವನೆ ರೈತರದ್ದಾಗಿದೆ.