ಯಳಂದೂರು: ಇವತ್ತು ರಾಜ್ಯದಲ್ಲಿ ಸಹಸ್ರಾರು ಅಂಗನವಾಡಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು ಇವುಗಳ ಪೈಕಿ ಹಲವು ಕೇಂದ್ರಗಳು ಶಿಥಿಲಾವಸ್ಥೆಯಲ್ಲಿವೆ. ಇದಕ್ಕೆ ಯಳಂದೂರು ಪಟ್ಟಣದ ಕುಂಬಾರ ಗುಂಡಿಯಲ್ಲಿರುವ ಐದನೇ ಅಂಗನವಾಡಿ ಕೇಂದ್ರ ಸಾಕ್ಷಿಯಾಗಿದೆ.
ಛಾವಣಿಯ ಒಡೆದ ಹಂಚು, ಬಿರುಕು ಬಿಟ್ಟ ಗೋಡೆ ಒಟ್ಟಾರೆ ಕಣ್ನೋಟದಿಂದಲೇ ಇಂದೋ ನಾಳೆಯೋ ಬೀಳಬಹುದೇನೋ ಎಂಬಂತೆ ಕಾಣುವ ಕಟ್ಟಡದಲ್ಲಿಯೇ ಅಂಗನವಾಡಿಯನ್ನು ನಡೆಲಾಗುತ್ತಿರುವುದು ಮಾತ್ರ ತುಕ್ಕು ಹಿಡಿದ ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ.
ಇದೀಗ ಬೀಸುವ ಬಿರುಗಾಳಿ ಮಳೆಗೆ ಈ ಕಟ್ಟಡ ಎಲ್ಲಿ ಬಿದ್ದು ಹೋಗುತ್ತೋ ಎಂಬ ಭಯ ಕಾಡುತ್ತಿದೆ. ಆದರೆ ಅದರಲ್ಲಿಯೇ ಬೇರೆ ದಾರಿಯಿಲ್ಲದ ಕಾರಣ ಅಂಗನವಾಡಿಯನ್ನು ಕಾರ್ಯಕರ್ತೆಯರು ನಡೆಸುತ್ತಿದ್ದಾರೆ. ಈ ಅಂಗನವಾಡಿಗೆ ಭೇಟಿ ನೀಡಿದರೆ ಭಯ ಕಾಡುತ್ತಿದೆ. ಬಿರುಕು ಬಿಟ್ಟ ಗೋಡೆ ವಿಷ ಜಂತುಗಳ ಅವಾಸ ಸ್ಥಾನವಾಗಿದೆ. ಛಾವಣಿಯಲ್ಲಿ ಹೆಂಚು ಜಾರಿ ಹೋಗಿದ್ದು ಇದನ್ನು ಸರಿಪಡಿಸಲು ಸಾಧ್ಯವಾಗದ ಸ್ಥಿತಿಯಿದೆ. ಒಂದು ವೇಳೆ ಹೆಂಚು ಸರಿ ಮಾಡಲು ಹೋದರೆ ಎಲ್ಲಿ ಛಾವಣಿ ಕುಸಿದು ಬೀಳುತ್ತೋ ಎಂಬ ಭಯವೂ ಕಾಡುತ್ತಿದೆ.
ಬೇಸಿಗೆಯಲ್ಲಿ ಬಿಸಲು, ಮಳೆಗಾಲದಲ್ಲಿ ನೀರು ಅಂಗನವಾಡಿ ಕೇಂದ್ರಕ್ಕೆ ಸರಾಗವಾಗಿ ನುಗ್ಗುತ್ತದೆ. ಇನ್ನು ಅಂಗನಾಡಿ ಕೇಂದ್ರದ ಪಕ್ಕದಲ್ಲೇ ಚರಂಡಿ ಹಾದು ಹೋಗಿದ್ದು ಅಲ್ಲಿಂದ ವಿಷ ಜಂತುಗಳು ಈ ಕಟ್ಟಡದೊಳಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ.
ದುಸ್ಥಿಯಲ್ಲಿರುವ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ಎಂಬ ಮನವಿಯನ್ನು ಕಳೆದ ಆರು ವರ್ಷಗಳಿಂದ ಎಲ್ಲರಿಗೂ ಕೊಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಖುದ್ದು ಶಾಸಕ ಎಸ್.ಜಯಣ್ಣ ಅವರೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದುರಸ್ತಿ ಮಾಡಿಸುವ ಭರವಸೆ ನೀಡಿ ಹೋಗಿದ್ದರೂ ಕಾರ್ಯ ರೂಪಕ್ಕೆ ಬಂದಿಲ್ಲ.
ಬಹಳಷ್ಟು ಅಂಗನವಾಡಿಗಳು ಇತ್ತೀಚೆಗೆ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡು ಗಮನಸೆಳೆಯುತ್ತಿವೆ. ಹೀಗಿರುವಾಗ ಸ್ವಂತ ನಿವೇಶನದಲ್ಲಿರುವ ಈ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ನೂತನ ಸುಸಜ್ಜಿತ ಕಟ್ಟಡವನ್ನು ಕಟ್ಟಲೇಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಇನ್ನು ಈ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಹೆಚ್ಚಿನ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಮಕ್ಕಳನ್ನು ಗಾಳಿ ಮಳೆಗೆ ಏನಾದರೂ ಕಟ್ಟಡ ಉರುಳಿ ಬಿದ್ದರೆ ಎಂಬ ಭಯವೂ ಅವರನ್ನು ಕಾಡುತ್ತಿದೆ.
ಈ ಕುರಿತಂತೆ ಪಟ್ಟಣ ಪಂಚಾಯ್ತಿ ಎರಡನೇ ವಾರ್ಡ್ ಸದಸ್ಯೆ ಶಿಲ್ಪಾ ರಂಗನಾಥ್ ಮಾತನಾಡಿ ಕಟ್ಟಡ ದುರಸ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಇದಲ್ಲದೆ ತಾಲೂಕಿನ ತಹಸೀಲ್ದಾರ್ ಚಂದ್ರಮೌಳಿರವರು ಕಟ್ಟಡವನ್ನು ಪರಿಶೀಲಿಸಿ ಹೋಗಿದ್ದು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಮುಂದೆಯಾದರೂ ಈ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರಾ? ಅಥವಾ ಕಟ್ಟಡ ಕುಸಿದು ಬಿದ್ದು ಅನಾಹುತವಾದ ಬಳಿಕ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.