ಮಡಿಕೇರಿ: ಪ್ರತಿಯೊಂದು ಸಮಾಜದಲ್ಲೂ ಬಡವರ್ಗದ ಮಂದಿ ಇದ್ದು, ಇವರ ಅಭ್ಯುದಯಕ್ಕಾಗಿ ಆಯಾ ಸಮಾಜದ ಚಿಂತಕರು ಸಹಾಯಹಸ್ತ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಕರೆ ನೀಡಿದ್ದಾರೆ.
ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ನಡೆದ 11ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಎಲ್ಲಾ ಸಮಾಜದಲ್ಲಿ ಕಂಡು ಬರುವ ಬಡವರ್ಗದ ಮಂದಿಯ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹವನ್ನು ಆಯೋಜಿಸುವ ಮೂಲಕ ಬಡ ಕನ್ಯೆಯರಿಗೆ ಕಂಕಣ ಭಾಗ್ಯ ಲಭಿಸುವಂತೆ ಮಾಡುತ್ತಿದ್ದಾರೆ. ಈ ರೀತಿ ಸಹಕಾರ ನೀಡುವುದರಿಂದ ಬಡ ಕುಟುಂಬಗಳ ಸಂಕಷ್ಟ ಕಡಿಮೆಯಾಗುತ್ತದೆ ಎಂದು ಸಚಿವ ಸೀತಾರಾಮ್ ಅಭಿಪ್ರಾಯಪಟ್ಟರು.
ಸಂಘ ಸಂಸ್ಥೆಗಳಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಕಳೆದ ನಾಲ್ಕು ವರ್ಷಗಳಿಂದ ಶಾದಿ ಭಾಗ್ಯ ಯೋಜನೆಯ ಮೂಲಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಿವಾಹಕ್ಕಾಗಿ ತಲಾ 50 ಸಾವಿರ ರೂ. ನೆರವು ನೀಡುತ್ತಿದೆ. ಕೊಡಗು ಜಿಲ್ಲೆಯ ಸುಮಾರು 400 ಮಂದಿ ಫಲಾನುಭವಿಗಳು ಶಾದಿ ಭಾಗ್ಯ ಯೋಜನೆಯ ಲಾಭ ಪಡೆದುಕೊಂಡಿದ್ದು, ಸಧ್ಯದಲ್ಲೆ ಇನ್ನೂ ನೂರು ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುವುದೆಂದರು.
ಬಡ ಕುಟುಂಬಗಳಿಗೆ ಸಹಾಯ ಮಾಡುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತದೆ ಎಂದು ಸಚಿವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.
ಖರ್ಚು ವೆಚ್ಚ ಭರಿಸುವ ಭರವಸೆ:
ಮುಂದಿನ ಸಾಲಿನ ಸಾಮೂಹಿಕ ವಿವಾಹದಲ್ಲಿ ಒಬ್ಬ ಕನ್ಯೆಯ ಮದುವೆಯ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಸಚಿವ ಸೀತಾರಾಮ್ ಘೋಷಿಸಿದರು.
ಜಿಲ್ಲಾಧಿಕಾರಿ ಡಾ|ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಬಡವರ್ಗದ ಅಭ್ಯುದಯಕ್ಕಾಗಿ ಸರ್ಕಾರದ ಮೂಲಕ ಅನೇಕ ಕಾರ್ಯಕ್ರಮಗಳಿದ್ದರೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಲು ಮುಂದೆ ಬರಬೇಕೆಂದರು. ಸಮಾಜದ ಅಭಿವೃದ್ಧಿಗಾಗಿ ಸಂಘ ಸಂಸ್ಥೆಗಳ ಪರಿಶ್ರಮ ಅಗತ್ಯವೆಂದ ಅವರು, ಸಾಮೂಹಿಕ ವಿವಾಹದಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಕೂಡ ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಬಡವರ್ಗಕ್ಕೆ ಆರ್ಥಿಕ ಹೊರೆಯನ್ನು ಹೇರುವ ವಿವಾಹಗಳಿಗೆ ಬದಲಾಗಿ ಸರಳ ಮತ್ತು ಸಾಮೂಹಿಕ ವಿವಾಹಗಳು ನಡೆದಲ್ಲಿ ಬಡ ಮಂದಿಯ ಸಂಕಷ್ಟ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿವಾಹಗಳು ಪ್ರದರ್ಶನಕ್ಕೆ ಸೀಮಿತವಾಗದೆ ಸರಳತೆಗೆ ಆದ್ಯತೆ ನೀಡಬೇಕೆಂದ ಅವರು ತಾವು ಕೂಡ ಯಾರಿಗೂ ತೊಂದರೆ ನೀಡದೆ ಸರಳ ವಿವಾಹವಾಗಿರುವ ಬಗ್ಗೆ ಅನುಭವವನ್ನು ಹಂಚಿಕೊಂಡರು.
ವಿವಾಹವಾಗುವುದಷ್ಟೇ ಅಲ್ಲದೆ ಮುಂದಿನ ಜೀವನದಲ್ಲಿ ದಂಪತಿಗಳು ಭಿನ್ನಾಭಿಪ್ರಾಯಗಳಿಲ್ಲದೆ ಅನ್ಯೋನ್ಯತೆಯಿಂದ ಬದುಕಲು ತಾಳ್ಮೆ ಅತೀ ಮುಖ್ಯವೆಂದು ಎಸ್ಪಿ ರಾಜೇಂದ್ರ ಪ್ರಸಾದ್ ಸಲಹೆ ನೀಡಿದರು. ಅನ್ಯೋನ್ಯತೆಯಿಂದ ಬದುಕುವ ಮೂಲಕ ಇತರರಿಗೆ ಮಾದರಿಯಾಗಬೇಕಲ್ಲದೆ, ಬದುಕನ್ನು ಕಟ್ಟಿ ಕೊಡುವ ಸಂಘಸಂಸ್ಥೆಗಳಿಗು ಕೀರ್ತಿಯನ್ನು ತರಬೇಕೆಂದರು.
ಮಾಜಿ ಶಾಸಕ ಹಾಗೂ ಸಮಿತಿಯ ಮಹಾ ಪೋಷಕರಾದ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮಾತನಾಡಿ, ದಾನ ಮಾಡುವ ಮನೋ ಧರ್ಮವನ್ನು ವಿಳಂಬವಿಲ್ಲದೆ ಪ್ರದರ್ಶಿಸಬೇಕೆಂದು ಕರೆ ನೀಡಿದರು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣ ಅತೀ ಮುಖ್ಯವಾಗಿದೆ. ಒಬ್ಬ ಹೆಣ್ಣು ಮಗು ಶೈಕ್ಷಣಿಕವಾಗಿ ಮುಂದುವರಿದರೆ ಇಡೀ ಮನೆಯೆ ಶಿಕ್ಷಣ ಪಡೆದಂತೆ ಎಂದು ಅಭಿಪ್ರಾಯಪಟ್ಟ ಇಬ್ರಾಹಿಂ ಅಲ್ಪಸಂಖ್ಯಾತರಿಗಾಗಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಮುಸ್ಲಿಂ ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ, ಒಗ್ಗಟ್ಟನ್ನು ಕಾಯ್ದಕೊಳ್ಳಬೇಕೆಂದು ಸಲಹೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 5 ಏಕರೆ ಭೂಮಿಯನ್ನು ಮಂಜೂರು ಮಾಡಬೇಕೆಂದು ಅವರು ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ್ಷಂಪ್ರತಿ ನೆರವನ್ನು ನೀಡುತ್ತಾ ಬರುತ್ತಿರುವ ಸ್ಥಳೀಯರು ಹಾಗೂ ಕತಾರ್ನಲ್ಲಿ ಉದ್ಯೋಗಿಯಾಗಿರುವ ಎಂ.ಎಂ.ಅಬ್ದುಲ್ ಲತೀಫ್ ಹಾಗೂ ಬ್ಯಾರಿ ಸಮಾಜದ ಹಿರಿಯರಾದ ಹಾಜಿ ಫಕೀರ್ ಸಾಹೇಬ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಯ್ಯದ್ ಕೆ.ಎಸ್.ಮುಕ್ತಾರ್ ತಂಞಳ್ ಕುಂಬೂಳ್, ಸಮಿತಿಯ ಅಧ್ಯಕ್ಷರಾದ ಎಫ್.ಎ.ಮಹಮ್ಮದ್ ಹಾಜಿ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷರಾದ ಎಂ.ಹೆಚ್. ಅಬ್ದುಲ್ ರೆಹೆಮಾನ್, ಉದ್ಯಮಿ ಮೊಹಮ್ಮದ್ ಹಾಜಿ, ಕೆಪಿಸಿಸಿ ಪ್ರಮುಖ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖರಾದ ಅಬ್ದುಲ್ ಮಜೀದ್, ತೋಡಾರು ಶಂಸುಲ್ ಉಲೆಮಾ ಅರೆಬಿಕ್ ಕಾಲೇಜಿನ ಜನಾಬ್ ಅಹಮ್ಮದ್ ನಹೀಂ, ನಗರದ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಎಂ.ಜಿ. ಯೂಸುಫ್ ಹಾಜಿ ಉಪಸ್ಥಿತರಿದ್ದರು.
14 ಮಂದಿಗೆ ಕಂಕಣ ಭಾಗ್ಯ:
ಅಲ್ ಅಮೀನ್ ಸಮಿತಿ ಈ ಬಾರಿ 14 ಬಡ ಕನ್ಯೆಯರಿಗೆ ಕಂಕಣ ಭಾಗ್ಯವನ್ನು ನೀಡಿದ್ದು, ಕಳೆದ 11 ವರ್ಷಗಳಲ್ಲಿ ಒಟ್ಟು 317 ಕನ್ಯೆಯರ ವಿವಾಹ ಮಾಡಿಕೊಡಲಾಗಿದೆ ಎಂದು ಸಮಿತಿಯ ಪ್ರಮುಖರಾದ ಎಂ.ಇ. ಮಹಮ್ಮದ್ ಇದೇ ಸಂದರ್ಭ ತಿಳಿಸಿದರು.
ಫೋಟೋ :: ಅಲ್ ಅಮಿನ್ 1, 2, 3, 4
==========================================