ಮಂಡ್ಯ: ಜೆಡಿಎಸ್ ನಿಂದ ಬಂಡಾಯವೆದ್ದು ಹೊರ ಹೋಗಿರುವ ಶಾಸಕರಿಗೂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರ ನಡುವಿನ ಮಾತಿನ ಜಟಾಪಟಿ ಮುಂದುವರೆದಿದ್ದು, ನನ್ನ ಬದುಕು ತೆರೆದ ಪುಸ್ತಕ ಒಂದು ವೇಳೆ ನಿಮ್ಮ ಬಳಿ ನನ್ನ ಕುರಿತ ನಗ್ನ ಸತ್ಯವಿದ್ದರೆ, ಅದನ್ನು ಬಿಚ್ಚಿಡಿ ನೋಡೋಣ ಎಂದು ಹೆಚ್.ಡಿ.ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನನ್ನು ಹೆದರಿಸಿ ರಾಜಕೀಯ ಮಾಡುತ್ತೇನೆ ಎನ್ನುವ ನಿಮ್ಮ ಕನಸು ಈ ಜನ್ಮದಲ್ಲಿ ನನಸಾಗುವುದಿಲ್ಲ ಎಂದು ಬಂಡಾಯ ಶಾಸಕರನ್ನುದ್ದೇಶಿಸಿ ನುಡಿದರಲ್ಲದೆ, ಚಲುವರಾಯಸ್ವಾಮಿ ಅವರನ್ನು ಸೋಲಿಸುವುದು ನನ್ನ ಗುರಿಯಲ್ಲ. ಅದಕ್ಕಾಗಿ ನನಗೆ ಅಧಿಕಾರ ಬೇಕಿಲ್ಲ. ರೈತರ ಉದ್ಧಾರ ನನ್ನ ಜೀವನದ ಗುರಿ ಎಂದರು.
ಸಾಲ ಬಾಧೆ ತಾಳಲಾರದೆ ಜಿಲ್ಲೆಯಲ್ಲಿ ಸುಮಾರು 150ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಸರ್ಕಾರ ಸಹಾಯ ಮಾಡದಿದ್ದರೂ ನಾನು 50 ರಿಂದ 1 ಲಕ್ಷ ರೂ. ಸಹಾಯ ಧನ ನೀಡಿದ್ದೇನೆ. ಆಗ ಈ ನೆಲದ ಸ್ವಂತ ಮಗ ಎಲ್ಲಿಗೆ ಹೋಗಿದ್ದ ಎಂದು ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು. ಜಮೀರ್ ಅಹಮದ್ ರಾಜಕೀಯಕ್ಕೆ ಬರದಿದ್ದರೆ ಹೇಗಿರುತ್ತಿದ್ದರು ಅನ್ನೋದು ಗೊತ್ತು. ರಾಜಕೀಯಕ್ಕೆ ಬಂದು ಏನೆಲ್ಲಾ ಮಾಡಿದ್ದಾರೆ ಅಂತಾನೂ ಗೊತ್ತು. ಹತ್ತು ವರ್ಷ ನನ್ನ ಜೊತೆ ಇದ್ದರು. ಯಾವುದಕ್ಕೆ ನನ್ನ ಜೊತೆ ಕೈ ಜೋಡಿಸಿದ್ದಾರೆ. ದೇವೇಗೌಡರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ನಾನು ನೋಡಿದಂತೆ ಯಾರೂ ಅಷ್ಟು ಮಾತನಾಡಿರಲಿಲ್ಲ. ನಿಮ್ಮ ಸಹವಾಸ ಮಾಡಿದ್ದಕ್ಕೆ ನೀವು ಕೊಟ್ಟ ಸರ್ಟಿಫಿಕೇಟ್ ಸಾಕು. ನಾವು ಇನ್ನು ಮುಂದೆ ನಿಮ್ಮ ಬಗ್ಗೆ ಮಾತನಾಡೋಲ್ಲ. ನೀವೂ ನಮ್ಮ ಬಗ್ಗೆ ಮಾತನಾಡಬೇಡಿ ಎಂದು ಹೇಳಿದರು.
ನಾನು ಅಧಿಕಾರ ಕೇಳ್ತಿರೋದು ದರ್ಪ ತೋರಿಸುವುದಕ್ಕಲ್ಲ. ರೈತರು ಮತ್ತು ರೈತರ ಕುಟುಂಬಗಳನ್ನು ಉಳಿಸೋಕೆ ಎಂದ ಅವರು, ಮತ ನೀಡಿ ಅಧಿಕಾರ ಕೊಟ್ಟರೆ 24 ಗಂಟೆಯೊಳಗೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದರು. ರೈತರ ಸಂಕಷ್ಟ ಮನಗಂಡು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನನ್ನ ಕೈಲಾದಷ್ಟು ಧನ ಸಹಾಯ ಮಾಡಿದ್ದೇನೆ. ಅವರ ಎಲ್ಲಾ ಸಮಸ್ಯೆಗಳಿಗೆ ಪರಿಹರಿಸಲು ನಾನೇನು ಸಾಹುಕಾರನಲ್ಲ. ನನ್ನ ಬಳಿ ಅಧಿಕಾರವೂ ಇಲ್ಲ. ಜನರು ಅಧಿಕಾರ ನೀಡಿದರೆ ಅವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ದೇವರ ಮೇಲೆ ಆಣೆ ಮಾಡಲು ಕರೆಯುವ ಜಮೀರ್, ಎಷ್ಟು ಸಲ ಅವರ ತಾಯಿ ಮೇಲೆ ಆಣೆ ಮಾಡಿದ್ದಾರೆ. ಅವರಿಗೆ ಹೆತ್ತ ತಾಯಿಯ ಮೇಲೆ ನಂಬಿಕೆ ಇಲ್ಲ. ಇನ್ನು ದೇವರ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ ಎಂದು ಕಟುವಾಗಿ ಹೇಳಿದರಲ್ಲದೆ, ಹತ್ತು ವರ್ಷ ಎಲ್ಲವನ್ನೂ ತಡೆದುಕೊಂಡು ಬಂದಿದ್ದೇನೆ. ಇವರೆಲ್ಲಾ ಸೇರಿ ನನಗೆ ಅಷ್ಟೆಲ್ಲಾ ಚಿತ್ರಹಿಂಸೆ ಕೊಟ್ಟಿದ್ದಾರೆ. ಸಿಎಂ ಆದ ಮೂರೇ ತಿಂಗಳಿಗೆ ನನ್ನನ್ನ ಅಧಿಕಾರದಿಂದ ಇಳಿಸೋಕೆ ಹೊರಟಿದ್ರು. ಇದನ್ನು ಮಂಡ್ಯದ ಜನರು ಮರೆತಿಲ್ಲ ಎಂದು ಛೇಡಿಸಿದರು.