ಚಿಕ್ಕೋಡಿ: ಬೆಳಗಾವಿಯ ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಗೆ ಬಿದ್ದ 6 ವರ್ಷದ ಕಾವೇರಿಯನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆ ಇಂದು ಮಧ್ಯಾಹ್ನದ ವೇಳೆಗೆ ಮುಗಿಯುವ ಸಾಧ್ಯತೆಯಿದೆ. ಮತ್ತೆ ಬಂಡೆ ಕಲ್ಲು ಅಡ್ಡ ಬಂದಿರುವುದರಿಂದ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿದೆ. ಬಾಲಕಿ ದೇಹಕ್ಕೆ ಯಾವುದೇ ಹಾನಿಯಾಗದಂತೆ ಹೊರತೆಗೆಯಲು ಪ್ರಯತ್ನ ನಡೆದಿರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ ಹಟ್ಟಿ ಚಿನ್ನದ ಗಣಿ ರಕ್ಷಣಾ ತಂಡದವರು ತಿಳಿಸಿದ್ದಾರೆ.
ಬಾಲಕಿಯನ್ನು ಮೇಲೆತ್ತುವ ಕಾರ್ಯಚರಣೆ ಮುಂದುವರಿಯುತ್ತಿದ್ದಂತೆ ಬಂಧನ ಭೀತಿಯಿಂದಾಗಿ ಜಮೀನು ಮಾಲೀಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಖಾಸಗಿ ಸುದ್ದಿಮಾಧ್ಯಮವೊಂದು ವರದಿ ಮಾಡಿರುವಂತೆ ಕೊಳವೆ ಬಾವಿ ಕೊರೆಸಿದ್ದ ಜಮೀನು ಮಾಲೀಕ ಶಂಕರಪ್ಪ ಹಿಪ್ಪರಗಿ ನಿನ್ನೆ ಸ್ಥಳದಿಂದ ಕಾಲ್ಕಿತ್ತಿದ್ದು, ಬಂಧನ ಭೀತಿಯಿಂದಾಗಿಯೇ ಆತ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಜಮೀನಲ್ಲಿಯೇ ಇರುವ ಆತನ ಮನೆ ಬಿಟ್ಟು ಹೋಗಿದ್ದು, ಕೊಟ್ಟಿಗೆಯಲ್ಲಿರುವ ಆತನ ದನ ಕರುಗಳು ಮೇವಿಲ್ಲದೆ ಪರಾದಾಡುತ್ತಿವೆ. ಇನ್ನು ಪರಾರಿಯಾಗಿರುವ ಶಂಕರಪ್ಪ ಬಂಧನಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ಬಾಲಕಿ ಕೊಳವೆ ಬಾವಿಗೆ ಬಿದ್ದು 36 ಗಂಟೆಗಳೇ ಕಳೆದು ಹೋಗಿದ್ದರೂ, ಆಕೆಯ ರಕ್ಷಣೆಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮಾತ್ರ ಇನ್ನೂ ನಿಂತಿಲ್ಲ. ಬಾಲಕಿ ಬಿದ್ದ ಕೊಳವೆ ಬಾವಿ ಸಮೀಪದಲ್ಲೇ ಎನ್ ಡಿಆರ್ ಎಫ್ ಸಿಬ್ಬಂದಿ ಬೋರ್ ವೆಲ್ ಕೊರೆದಿದ್ದು, ಅಲ್ಲಿಂದ ಸಮಾನಂತರವಾಗಿ ಮತ್ತೆರಡು ಅಡಿಗಳ ಕೆಳಗೆ ಗುಂಡಿ ತೋಡಿ ಬಾಲಕಿಯನ್ನು ಎಳೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಏತನ್ಮಧ್ಯೆ ಇಂದು ಬೆಳಗ್ಗೆ ಮತ್ತೆ ಕೊಳೆವೆ ಬಾವಿಗೆ ಸಿಸಿಟಿವಿ ಕ್ಯಾಮೆರಾವನ್ನು ಇಳಿ ಬಿಟ್ಟು ಬಾಲಕಿಯ ಚಲನವಲನ ಗಮನಿಸಲಾಯಿತು. ಆದರೆ ನಿನ್ನೆಯಂತೆಯೇ ಕೊಳವೆ ಬಾವಿಯಲ್ಲಿ ಬಾಲಕಿಯ ಕೈ ಮಾತ್ರ ಕಾಣಿಸುತ್ತಿದ್ದು, ಕೈಯಲ್ಲಿ ಯಾವುದೇ ಚಲನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿ ರಕ್ಷಣಾ ಕಾರ್ಯಾಚರಣೆ ನೋಡಲು ಗಡಿ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದ ಜನಸಾಗರವೇ ಹರಿದು ಬರತ್ತಿದೆ. ಒಟ್ಟಾರೆಯಾಗಿ ಬಾಲಕಿ ಕಾವೇರಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಝುಂಜರವಾಡ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.