ಮಂಡ್ಯ: ಅಶೋಕನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಬ್ಯಾಂಕಿನಲ್ಲಿ 15 ಲಕ್ಷ ರೂ. ಕಳ್ಳತನವಾಗಿರುವ ಘಟನೆ ನಡೆದಿದ್ದು ಗ್ರಾಹಕರು ಅಥವಾ ಬ್ಯಾಂಕಿನ ಸಿಬ್ಬಂದಿಯೇ ಕಳ್ಳತನ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ತಾಲೂಕಿನ ಶಿವಳ್ಳಿ ಸಿಂಡಿಕೇಟ್ ಬ್ಯಾಂಕ್ ನ ನೌಕರ ಮಂಜುನಾಥ್ ಅವರು ಸೋಮವಾರ ಮಧ್ಯಾಹ್ನ ಅಶೋಕ ನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್ನ ಮುಖ್ಯ ಕಚೇರಿಗೆ ಆಗಮಿಸಿ 15 ಲಕ್ಷ ಬ್ಯಾಂಕ್ ನಗದೀಕರಿಸಿದ್ದರು. ಬ್ಯಾಂಕ್ನ ಕ್ಯಾಷಿಯರ್ ವಿದ್ಯಾ ಮಂಜುನಾಥ್ ಗೆ 2000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು ನೀಡಿದ್ದರು. ನಮಗೆ ಸ್ವಲ್ಪ 100 ರೂ.ಗಳ ನೋಟುಗಳನ್ನು ನೀಡಬೇಕು ಎಂದು ಮಂಜುನಾಥ್ ಕೇಳಿಕೊಂಡಿದ್ದರು.
ನಮ್ಮಲ್ಲಿ 100ರ ನೋಟ್ ಇಲ್ಲ, ಬೇಕಿದ್ದರೆ ಮ್ಯಾನೇಜರ್ನ್ನು ಸಂಪರ್ಕಿಸುವಂತೆ ಅವರು ಹೇಳಿದ್ದರು ಎನ್ನಲಾಗಿದೆ. ಹಣದ ಚೀಲವನ್ನು ಕ್ಯಾಷಿಯರ್ ಕೌಂಟರ್ ಬಳಿಯೇ ಬಿಟ್ಟ ಮಂಜುನಾಥ್ ಮ್ಯಾನೇಜರ್ ಬಳಿಗೆ ತೆರಳಿ ನಮಗೆ 100 ರೂ.ಗಳ ನೋಟುಗಳನ್ನು ಕೊಡಿಸಿಕೊಡುವಂತೆ ಮನವಿ ಮಾಡಿದರು. ಮತ್ತೆ ಮ್ಯಾನೇಜರ್ ಕ್ಯಾಷಿಯರ್ ವಿದ್ಯಾಗೆ 100 ರೂ.ಗಳ ನೋಟುಗಳನ್ನು ನೀಡುವಂತೆ ಸೂಚಿಸಿದರು. ಬಳಿಕ ಮಂಜುನಾಥ್ ಹಣವನ್ನು ಕ್ಯಾಷಿಯರ್ಗೆ ವಾಪಸ್ಸು ಕೊಡಲು ಬಂದಾಗ ಹಣದ ಚೀಲ ಮಾಯವಾಗಿತ್ತು. ಇದರಿಂದ ಗಾಬರಿಗೊಂಡ ಬ್ಯಾಂಕಿನ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕಿನಲ್ಲಿದ್ದ ಎಲ್ಲಾ ಗ್ರಾಹಕರನ್ನು ತೀವ್ರ ತಪಾಸಣೆಗೆ ಒಳಪಡಿಸಿ ಅವರ ವಿಳಾಸವನ್ನು ಪಡೆದು ಹೊರ ಕಳುಹಿಸಿದರು. ಆದರೆ, ಹಣ ಮಾತ್ರ ಲಭ್ಯವಾಗಲಿಲ್ಲ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರೂ ಹಣದ ಸುಳಿವು ಸಿಗಲಿಲ್ಲ. ಘಟನೆಯಿಂದಾಗಿ ಬ್ಯಾಂಕಿನ ವ್ಯವಹಾರ ವಿಳಂಬವಾಗಿತ್ತು. ಗ್ರಾಹಕರು ಪರದಾಡುವಂತಾಯಿತು. ಘಟನೆ ನಡೆದ ಬಳಿಕ ಬ್ಯಾಂಕಿನಲ್ಲಿ ಹಣ ಕಳ್ಳತನವಾಗಲು ಸಿಬ್ಬಂದಿಯೇ ಕಾರಣ ಎಂಬ ಅನುಮಾನ ಪೊಲೀಸರನ್ನು ಕಾಡಿತ್ತು. ಬ್ಯಾಂಕಿನ ಸಿಬ್ಬಂದಿಯೇ ಹಣ ಕದ್ದು ಬೇರೊಬ್ಬರ ಮೂಲಕ ಹೊರಗೆ ಕಳುಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಎಲ್ಲಾ ಸಿಬ್ಬಂದಿ ತೀವ್ರ ವಿಚಾರಣೆಗೆ ನಡೆಯುತ್ತಿದೆ.
ನೆಲಮಹಡಿಯ ನವೀಕರಣ ಹಿನ್ನೆಲೆಯಲ್ಲಿ ಬ್ಯಾಂಕಿನ ಕಚೇರಿಯನ್ನು ಎರಡು ತಿಂಗಳ ಹಿಂದಷ್ಟೇ ಮೇಲ್ಮಹಡಿಗೆ ಸ್ಥಳಾಂತರಗೊಳಿಸಲಾಗಿತ್ತು. ಬ್ಯಾಂಕಿನ ವ್ಯವಹಾರಗಳನ್ನು ಮೇಲ್ಮಡಿಯಲ್ಲಿ ತಾತ್ಕಾಲಿಕವಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಲ್ಲಿ ಅಳವಡಿಸಿರಲಿಲ್ಲ. ಈ ವಿಷಯ ತಿಳಿದ ಯಾರೋ ಹಣವನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಸಂತೋಷ್ ಇತರೆ ಉನ್ನತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.