ಮೂಡಿಗೆರೆ: ಹಳೆ ಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಸ.ನಂ.7 ರಲ್ಲಿ ಸರಕಾರಿ ಜಾಗದಲ್ಲಿ ವಸತಿ ರಹಿತರು ನಿರ್ಮಿಸಿ ವಾಸಿಸುತ್ತಿದ್ದ 175 ಗುಡಿಸಲುಗಳನ್ನು ತಾಲೂಕು ಆಡಳಿತ ಪೊಲೀಸರ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದೆ.
ಬೆಳಗ್ಗೆ 7:30ರ ವೇಳೆಯಲ್ಲಿ ತಹಸೀಲ್ದಾರ್ ನೇತೃತ್ವದ ತಂಡ ಗುಡಿಸಲು ವಾಸಿಗಳಿಗೆ ಮುನ್ಸೂಚನೆ ನೀಡದೇ ತೆರವುಗೊಳಿಸಿದರು. ಈ ವೇಳೆ ಗುಡಿಸಲಿನಲ್ಲಿ ಮಲಗಿದ್ದ ಮಕ್ಕಳು ಸೇರಿದಂತೆ ನಿವಾಸಿಗಳು ಬೊಬ್ಬಿರಿದುಕೊಂಡರು. ಗುಡಿಸಲು ತೆರವುಗೊಳಿಸುತ್ತಿದ್ದುದ್ದನ್ನು ನೋಡಿದ ನಿವಾಸಿಗಳು ತೀವ್ರ ಪ್ರತಿರೋಧ ಒಡ್ಡಿದರು. ಅಯ್ಯಯ್ಯೋ ನಮ್ಮ ಗುಡಿಸಲನ್ನು ತೆರವುಗೊಳಿಸಬೇಡಿ. ನಿಮ್ಮ ಕಾಲಿಗೆ ಬೀಳುತ್ತೇವೆ. ವಾಸಿಸಲು ನಮಗೆ ಬೇರೆ ಮನೆಯಿಲ್ಲ. ನಮ್ಮ ಮೇಲೆ ಕನಿಕರ ತೋರಿಸಿ. ಇಲ್ಲವಾದರೆ ನಾವು ಸೀಮೆಎಣ್ಣೆ ಸುರಿದುಕೊಂಡು ಸಾಯುತ್ತೇವೆಂದು ಮಹಿಳೆಯರು ಗೋಳಾಡುತ್ತಾ ಅಳತೊಡಗಿದರು’ ಇದನ್ನು ಲೆಕ್ಕಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವು ಪ್ರಕ್ರಿಯೆಯನ್ನು ಮುಂದುವರೆಸಿದಾಗ ತಡೆಯೊಡ್ಡಿ ಅಧಿಕಾರಿಗಳಿಗೂ ಹಾಗೂ ಅವರಿಗೆ ಕುಮ್ಮಕ್ಕುನ ನೀಡಿದ್ದಾರೆ ಎಂದು ಆರೋಪಿಸಿ ಜಿಪಂ ಸದಸ್ಯೆ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಆಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಏರ್ಪಟ್ಟಿತ್ತು. ಅಪಾಯದ ಮುನ್ಸೂಚನೆ ಅರಿತ ಪೊಲೀಸರು ಸಶಸ್ತ್ರ ಮೀಸಲು ಪಡೆಯ ತುಕಡಿ ಸಹಿತ ತಾಲೂಕಿನ ಎಲ್ಲಾ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು. ನಂತರ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಿ ಗುಡಿಸಲು ಸಲಕರಣಿಗಳನ್ನು ಪ.ಪಂ ಟ್ರಾಕ್ಟರ್ ಗೆ ತುಂಬಿಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಾರಸುದಾರರಿಗೆ ಒಪ್ಪಿಸಿದರು. ತಹಸೀಲ್ದಾರ್ ನಂದಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ 40 ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ತೊಡಗಿದ್ದರು. ಡಿವೈಎಸ್ಪಿ ಶೇಖ್ ಹುಸೇನ್, ವೃತ್ತ ನಿರೀಕ್ಷಕ ಜಗದೀಶ್, ಎಲ್ಲಾ ಠಾಣೆಯ ಪಿಎಸ್ಐಗಳು ಹಾಗೂ 80 ಸಿಬ್ಬಂದಿಗಳು ಬಂದೂಬಸ್ತ್ ಕೈಗೊಂಡಿದ್ದರು.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>