ಮಡಿಕೇರಿ: ಡಾ|ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳ್ಳಲು ಅವಕಾಶ ನೀಡುವುದಿಲ್ಲವೆಂದು ಕೊಡಗಿನಲ್ಲಿ ಸುಳ್ಳು ಹೇಳಿಕೆ ನೀಡುವ ಬದಲು ದೆಹಲಿಯಲ್ಲಿ ಈ ಕುರಿತು ಯಾವ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂಬುವುದನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಸ್ಪಷ್ಟಪಡಿಸಬೇಕೆಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ|ಇ.ರ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸದಾನಂದ ಗೌಡರು ಡಾ| ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡುವುದಿಲ್ಲವೆಂದು ಕೊಡಗಿನ ಜನರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಕೇರಳ ಮತ್ತು ಮಹಾರಾಷ್ಟ್ರಗಳಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮಾಹಿತಿ ರವಾನಿಸಿಲ್ಲ. ಈಗಲಾದರು ಕೇರಳ ಮಾದರಿಯಲ್ಲಿ ಆಕ್ಷೇಪಣೆ ಸಲ್ಲಿಸಲಿ ಎಂದು ಹೇಳುವ ಮೂಲಕ ಸದಾನಂದ ಗೌಡರು ಬಿಜೆಪಿಯ ವಚನಭ್ರಷ್ಟತೆಯನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿಯ ಪ್ರಣಾಳಿಕೆಯ ಪ್ರಕಾರ ಅಧಿಕಾರಕ್ಕೆ ಬಂದರೆ ಡಾ| ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಲು ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಲಾಗಿತ್ತು. ಈ ಭರವಸೆಯಂತೆ ನಡೆದುಕೊಳ್ಳದ ಬಿಜೆಪಿ ಮುಖಂಡರುಗಳು ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಟೀಕಿಸುವ ಬಿಜೆಪಿ ಕೇಂದ್ರದಲ್ಲಿರುವ ತನ್ನ ಸರ್ಕಾರದ ಮೇಲೆ ಪ್ರಭಾವ ಬೀರಿ ವರದಿ ಜಾರಿಯಾಗದಂತೆ ತಡೆಯಬಹುದಾಗಿತ್ತಲ್ಲ ಎಂದು ಇ.ರ. ದುರ್ಗಾಪ್ರಸಾದ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಬಿಜೆಪಿ ಶಾಸಕರುಗಳ ನೇತೃತ್ವದ ಡಾ| ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ 10 ಸಾವಿರ ಆಕ್ಷೇಪಣೆಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರ ಇದಕ್ಕೆ 2016 ಫೆ.27 ರಂದು ನೀಡಿದ ಉತ್ತರ ಕಸ್ತೂರಿ ರಂಗನ್ ವರದಿ ಜಾರಿಗೆ ಪೂರಕವಾಗಿ ಕರಡು ಅಧಿಸೂಚನೆ ಹೊರಡಿಸಿದ್ದೆಂದು ವ್ಯಂಗ್ಯವಾಡಿದರು. ವರದಿ ಅನುಷ್ಠಾನ ಪ್ರಕ್ರಿಯೆಯು ಕೊನೆಯ ಹಂತದಲ್ಲಿದ್ದು, ಡಿ.ವಿ. ಸದಾನಂದ ಗೌಡರ ಸುಳ್ಳು ಹೇಳಿಕೆಗಳಿಂದ ಇದನ್ನು ತಡೆಯಲು ಸಾಧ್ಯವಿಲ್ಲವೆಂದ ದುರ್ಗಾಪ್ರಸಾದ್, ಕೇಂದ್ರ ಸರ್ಕಾರ ಹೆಚ್ಚಿನ ಕಾಳಜಿ ತೋರಿ ಮತ್ತೊಮ್ಮೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಮಾತ್ರ ವರದಿ ಅನುಷ್ಠಾನವನ್ನು ತಡೆಯಲು ಸಾಧ್ಯವಿದೆ ಎಂದರು.
ತನ್ನ ತಪ್ಪನ್ನು ಮುಚ್ಚಿ ಹಾಕಲು ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುವ ಬದಲು ಚುನಾವಣೆಯ ಸಂದರ್ಭ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳಲಿ ಎಂದು ಸವಾಲು ಹಾಕಿದರು. ಕೇರಳದ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಬೇಕೆಂದು ಡಿ.ವಿ. ಸದಾನಂದ ಗೌಡರು ನೀಡಿರುವ ಸಲಹೆ ಅರ್ಥಹೀನವಾಗಿದೆ. ಎರಡೂ ರಾಜ್ಯಗಳ ವರದಿಯಲ್ಲಿನ ವ್ಯತ್ಯಾಸಗಳನ್ನು ಅರಿಯದ ಸದಾನಂದ ಗೌಡರು ಕೇಂದ್ರ ಸಚಿವರಾಗಲು ಅರ್ಹರಲ್ಲವೆಂದು ಡಾ| ದುರ್ಗಾಪ್ರಸಾದ್ ಟೀಕಿಸಿದರು.
ಪಶ್ಚಿಮಘಟ್ಟಕ್ಕೆ ಸೇರಿದ ಜಿಲ್ಲೆಗಳ 8 ಸಂಸದರಲ್ಲಿ ಆರು ಮಂದಿ ಬಿಜೆಪಿಯವರೇ ಆಗಿದ್ದು ಇವರುಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವರದಿ ಜಾರಿಯನ್ನು ತಡೆಯಲು ಯಾಕೆ ಪ್ರಯತ್ನಿಸಲಿಲ್ಲವೆಂದು ಪ್ರಶ್ನಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರಾದರು ತಮ್ಮ ಪ್ರಭಾವ ಬಳಸಬಹುದಾಗಿತ್ತಲ್ಲ ಎಂದು ಅಭಿಪ್ರಾಯಪಟ್ಟ ದುರ್ಗಾಪ್ರಸಾದ್, ಇನ್ನಾದರು ಸಚಿವ ಸದಾನಂದ ಗೌಡ ಅವರು ವಚನ ಭ್ರಷ್ಟತೆಯನ್ನು ಮರೆಮಾಚಲು ಸುಳ್ಳು ಹೇಳುವುದನ್ನು ಬಿಟ್ಟು ಪ್ರಣಾಳಿಕೆಯ ಭರವಸೆಯಂತೆ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಬಿ. ರಮೇಶ್ ಹಾಗೂ ಎ.ಸಿ. ಸಾಬು ಉಪಸ್ಥಿತರಿದ್ದರು. ಫೋಟೋ :: ಸಿಪಿಐಎಂ
===========================================