ಗುಂಡ್ಲುಪೇಟೆ: ಉಪಚುನಾವಣೆಯ ಸಂದರ್ಭ ಸರ್ಕಾರದ ಕಡೆಯಿಂದ ಭರವಸೆಗಳ ಮಳೆಯನ್ನೇ ಸುರಿಸಲಾಗಿದ್ದರೂ ಇಲ್ಲಿನ ಕೆಲವು ಗ್ರಾಮಗಳ ಜನ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಮಾತ್ರ ತಪ್ಪಿಲ್ಲ.
ಗುಂಡ್ಲುಪೇಟೆಯ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಒಂದು ಕೊಡ ನೀರಿಗಾಗಿ ಹೊಡೆದಾಡಿ ಪಡೆಯುವಂತಾಗಿದೆ. ಬೆಳಿಗ್ಗೆ ಎದ್ದರೆ ನೀರು ಎಲ್ಲಿ ಸಿಗುತ್ತದೆ ಎಂದು ಹುಡುಕಾಡುವಂತಾಗಿದೆ. ತಾಲೂಕಿನ ಮಲ್ಲಯ್ಯನಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಜನ ನೀರು ಹುಡುಕಿಕೊಂಡು ಕಿ.ಮೀ.ಗಟ್ಟಲೆ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಆಕ್ರೋಶಗಳು ಜನವಲಯದಲ್ಲಿ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ಟ್ಯಾಂಕರ್ ನಲ್ಲಿ ನೀರನ್ನು ಸರಬರಾಜು ಮಾಡಿದ್ದು, ನೀರಿಗಾಗಿ ಜನ ಖಾಲಿ ಕೊಡ ಹಿಡಿದು ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಗ್ರಾಮದ ಜನ ನೀರಿಗಾಗಿ ಎಷ್ಟೊಂದು ಕಷ್ಟಪಡುತ್ತಿದ್ದಾರೆ ಎಂಬುದನ್ನು ಸಾರಿ ಹೇಳುವಂತಿತ್ತು.
ಮಲ್ಲಯ್ಯನಪುರ ಗ್ರಾಮದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಲೈನ್ ನಿರ್ಮಾಣ ಮಾರ್ಗದಲ್ಲಿ ಕಲ್ಲು ಬಂಡೆಯು ಅಡ್ಡ ಬಂದಿದ್ದು ಕಾಮಗಾರಿಯು ಸ್ಥಗಿತವಾಗಿದೆ ಹೀಗಾಗಿ ಇಲ್ಲಿಗೆ ನೀರು ಸರಬರಾಜಾಗದೆ ಜನ ನೀರಿಗಾಗಿ ಅಲೆಯುವಂತಾಗಿತ್ತು. ಗ್ರಾಮದಲ್ಲಿ ಕುಡಿಯುವ ನೀರಿಗೆ ಉಂಟಾಗಿರುವ ತೀವ್ರ ತೊಂದರೆ ಬಗ್ಗೆ ತಹಸೀಲ್ದಾರ್ ಕೆ.ಸಿದ್ದು ಅವರ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗ್ರಾಮಸ್ಥರು ನೀರಿಗಾಗಿ ಕಳೆದ ಐದಾರು ತಿಂಗಳಿನಿಂದ ಪಡುತ್ತಿರುವ ಬವಣೆಯನ್ನು ವಿವರಿಸಿದ್ದರು.
ಇದಕ್ಕೆ ಸ್ಪಂದಿಸಿದ ಅವರು ಕೂಡಲೇ ಗ್ರಾಮಕ್ಕೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ಗ್ರಾಮಕ್ಕೆ ನೀರು ಬಂದಿದ್ದು, ನೀರಿಲ್ಲದೆ ಪರದಾಡುತ್ತಿದ್ದ ಗ್ರಾಮಸ್ಥರು ಟ್ಯಾಂಕರ್ ನಲ್ಲಿ ಬಂದ ನೀರನ್ನು ಕಂಡು ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂತು…