ಹನೂರು: ಸಮೀಪದ ಲೊಕ್ಕನ ಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರಿ ಗಾಳಿ ಮಳೆಗೆ ಮರಗಳು ಬುಡಸಹಿತ ಕಿತ್ತು ಬಿದ್ದರೆ, ಮನೆಗಳ ಮೇಲ್ಛಾವಣಿ ಮತ್ತು ಹೆಂಚುಗಳು ಹಾರಿಹೋಗಿ ಲಕ್ಷಾಂತರ ರೂ. ನಷ್ಟವಾಗಿದೆ.
ಮಂಗಳವಾರ ರಾತ್ರಿ ದಿಢೀರ್ ಮಳೆ ಸುರಿಯಲಾರಂಭಿಸಿತು. ನೋಡು ನೋಡುತ್ತಲೇ ರಭಸದಿಂದ ಗಾಳಿ ಬೀಸಿದ್ದರಿಂದ ರಸ್ತೆ ಬದಿಯಲ್ಲಿದ್ದ ಮರವೊಂದು ಬುಡಸಹಿತ ನೆಲಕ್ಕೆ ಉರುಳಿದ ಪರಿಣಾಮ ಅದರ ಕೆಳಗೆ ನಿಲ್ಲಿಸಿದ್ದ ಕಾರು ಹಾಗೂ ಟ್ರ್ಯಾಕ್ಟರ್ ಜಖಂಗೊಂಡಿದೆ. ಇನ್ನು ಗೋಶಾಲೆಗಾಗಿ ನಿರ್ಮಿಸಿದ್ದ ಶೆಡ್ ಗಾಳಿಗೆ ನೆಲಸಮವಾಗಿದೆ. ಆದರೆ ಅದೃಷ್ಟ ವಶಾತ್ ಜಾನುವಾರುಗಳು ಇರಲಿಲ್ಲ. ಲೊಕ್ಕನಹಳ್ಳಿ ಗ್ರಾಮದಲ್ಲಿ ಮನೆಗಳ ಹಂಚುಗಳು ಗಾಳಿಗೆ ಹಾರಿ ಹೋಗಿದ್ದರಿಂದ ಮಳೆ ನೀರು ಒಳನುಗ್ಗಿ ಜನರು ಪರದಾಡುವಂತಾಯಿತು.
ಮಳೆಗೆ ತುಂಬಿದ ಕೆರೆಗಳು
ಈ ನಡುವೆ ಗ್ರಾಮದಲ್ಲಿದ್ದ ಕೆರೆಗಳನ್ನು ಗ್ರಾಪಂ ಅಧ್ಯಕ್ಷರಾಗಿದ್ದ ರಂಗಶೆಟ್ಟಿಯವರು ಮುತುವರ್ಜಿ ವಹಿಸಿ ದುರಸ್ತಿ ಮಾಡಿದ್ದರಿಂದ ರಾತ್ರಿ ಸುರಿದ ಒಂದೇ ಮಳೆಗೆ ಕೆರೆಗಳು ತುಂಬಿದ್ದು ರೈತರು ಹರ್ಷ ಪಡುವಂತಾಗಿದೆ. ಸದ್ಯ ಬತ್ತಿ ಹೋಗಿದ್ದ ಆಂಡಿಪಾಳ್ಯ ಕೆರೆ, ಕೊಂಡದ ಕೆರೆ ಮತ್ತು ಲೊಕ್ಕನಹಳ್ಳಿ ದೊಡ್ಡ ಕೆರೆಗಳಲ್ಲಿ ಜೀವಜಲ ಕಾಣಿಸಿಕೊಂಡಿದ್ದು ರೈತರು ಖುಷಿ ಪಡುವಂತಾಗಿದೆ.
ಮಳೆಯಿಂದ ಅನಾಹುತ ಸಂಭವಿಸಿರುವ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು ಮತ್ತು ಗ್ರಾಮ ಪಂಚಾಯಿತಿ ಪಿಡಿಒ ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಸಿ.ರಂಗಶೆಟ್ಟಿ, ಉಪಾಧ್ಯಕ್ಷ ಸುಮತಿ ಅವರು ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ. ಗ್ರಾಮದಲ್ಲಿ ಮಳೆಯಿಂದ ಅವಘಡ ಸಂಭವಿಸಿದ್ದರೂ ಕಂದಾಯ ಇಲಾಖೆ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜು ಅವರು ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದ್ದಾರೆ.