ಮಡಿಕೇರಿ: ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಲೇಮಾಡು ಪೈಸಾರಿ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವಂತೆ ಒತ್ತಾಯಿಸಿ ಪಾಲೆೇಮಾಡಿನ ಕಾನ್ಶಿರಾಂ ನಗರದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ‘ಕಾಲ್ನಡಿಗೆ ಜಾಥ’ ನಡೆಸುವುದಾಗಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷರಾದ ಪ್ರೇಂ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೇಮಾಡು ಪೈಸಾರಿಯಲ್ಲಿ ನೆಲೆಸಿರುವ 260 ಕುಟುಂಬಗಳಿಗೆ ಹಕ್ಕು ಪತ್ರವನ್ನು ಒದಗಿಸುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಪಕ್ಷ ಆಗ್ರಹಿಸುತ್ತದೆ ಎಂದರು.
ಈ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೇ 2 ರಂದು ಪಾಲೆೇಮಾಡು ಕಾನ್ಶಿರಾಂ ನಗರದಿಂದ ಕಾಲ್ನಡಿಗೆ ಜಾಥ ಆರಂಭಗೊಳ್ಳಲಿದ್ದು, ಅಂದು ಸಂಜೆ ಮೇಕೇರಿಯಲ್ಲಿ ತಂಗಲಿದೆ. ಮರುದಿನ ಮೇ 3 ರಂದು ಮೇಕೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಜಾಥಾ ನಡೆಸಲಾಗುವುದು. ನಂತರ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಜಾಥದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷರಾದ ಎನ್.ಮಹೇಶ್, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಪ್ರೇಮ್ ಕುಮಾರ್ ತಿಳಿಸಿದರು.
ಪಾಲೇಮಾಡುವಿನಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಲು ಸ್ಥಳಕ್ಕೆ ಆಗಮಿಸಿ ಅಲ್ಲಿನ ನಿವಾಸಿಗಳ ಮೇಲೆ ದೌರ್ಜನ್ಯವೆಸಗಿರುವ ಹೊದ್ದೂರು ಗ್ರಾಮ ಪಂಚಾಯ್ತಿ ಪಿಡಿಒ ಚೋಂದಕ್ಕಿ, ಸಿಐ ಪ್ರದೀಪ್ ಕುಮಾರ್ ಹಾಗೂ ಎಸ್ಐ ಶಿವಪ್ರಕಾಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಬಂಧಿಸಬೇಕೆಂದು ಅವರು ಇದೇ ಸಂದರ್ಭ ಆಗ್ರಹಿಸಿದರು.
ಪಾಲೆೇಮಾಡಿನಲ್ಲಿ ಕಳೆದ ಒಂದು ದಶಕದಿಂದ ನಿರ್ಗತಿಕ ಕುಟುಂಬಗಳು ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿವೆ. ಅವರಿಗೆ ಹಕ್ಕುಪತ್ರವನ್ನು ನೀಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು. ಕೋಮು ಶಕ್ತಿಗಳಿಗೆ ಅಲ್ಲಿ ಅನಗತ್ಯವಾಗಿ ಗಲಭೆಗಳನ್ನು ಹುಟ್ಟು ಹಾಕಲು ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಸಂಯೋಜಕ ರಫೀಕ್ ಖಾನ್ ಮಾತನಾಡಿ, ಪಾಲೇಮಾಡಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಆಡಳಿತ ವ್ಯವಸ್ಥೆ ಅಲ್ಲಿರುವ ನಿವಾಸಿಗಳನ್ನು ಮನುಷ್ಯರಂತೆ ನಡೆಸಿಕೊಂಡಿಲ್ಲವೆಂದು ಆರೋಪಿಸಿದರು. ಅಲ್ಲಿನ ನಿವಾಸಿಗಳು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಸ್ತೆಗಳಿಗೆ ಅಳವಡಿಸಿದ ನಾಮಫಲಕವನ್ನು ಗ್ರಾಮ ಪಂಚಾಯ್ತಿ ತೆರವುಗೊಳಿಸುವ ಮೂಲಕ ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಿದೆ ಎಂದರು. ವಿವಾಸಿಗಳು ಹಾಗೂ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕೆಂದು ರಫೀಕ್ ಖಾನ್ ಒತ್ತಾಯಿಸಿದರು.
ಪಕ್ಷದ ಉಪಾಧ್ಯಕ್ಷರಾದ ಜಯಪ್ಪ ಹಾನಗಲ್ ಮಾತನಾಡಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಪಾಲೇಮಾಡಿನ ಸಮಸ್ಯೆ ಬಗೆಹರಿಯುತಿತ್ತು. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತೇವೆಂದು ಪಾಲೇಮಾಡಿನಲ್ಲಿ ನೆಲೆ ನಿಂತಿರುವ ಮಂದಿಯ ಸಂಕಷ್ಟಗಳಿಗೆ ಜಿಲ್ಲಾಡಳಿತ ಸ್ಪಂದಿಸಿದ್ದಲ್ಲಿ ಈಗಿನ ಸಂಕಷ್ಟ ಎದುರಾಗುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟರು. ಬಿಎಸ್ಪಿ ನಾಯಕ ಕಾನ್ಶಿರಾಂ ಅವರ ಹೆಸರನ್ನು ಅಲ್ಲಿನ ಪೈಸಾರಿಗೆ ಇಟ್ಟಿರುವುದರಿಂದ ಆ ಪ್ರದೇಶದ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆ ಮುಂದಾಗುತ್ತಿಲ್ಲವೇನೋ ಎಂದು ಸಂಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕುಂಞ ಹಾಗೂ ಜಿಲ್ಲಾ ಮುಖಂಡರಾದ ಜಯರಾಂ ಉಪಸ್ಥಿತರಿದ್ದರು.
ಫೋಟೋ :: ಬಿಎಸ್ಪಿ