ಕೆ.ಆರ್.ಪೇಟೆ: ಮುಂಗಾರು ಆರಂಭದ ಮಳೆ ಸುರಿಯುತ್ತಿದ್ದಂತೆಯೇ ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿದ್ದು, ಮಳೆಹಾನಿಯಿಂದ ನಷ್ಟಕ್ಕೊಳಗಾಗಿರುವ ಮಂದಿ ಆಕಾಶ ನೋಡುವಂತಾಗಿದೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಭಾರೀ ಗಾತ್ರದ ಬೇವಿನ ಮರವೊಂದು ವಾಸದ ಮನೆಯ ಮೇಲೆ ಉರುಳಿ ಬಿದ್ದಿದ್ದರಿಂದ ಮನೆ ಜಖಂಗೊಂಡಿದ್ದು ಸುಮಾರು 1ಲಕ್ಷ ರೂ ನಷ್ಟವುಂಟಾಗಿರುವುದಾಗಿ ನಿವಾಸಿ ರಾಮಕೃಷ್ಣೇಗೌಡ ಅವರು ಅಳಲು ತೋಡಿಕೊಂಡಿದ್ದಾರೆ.
ಅವರ ತೋಟದ ಬಳಿ ಇರುವ ವಾಸದ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮರಬಿದ್ದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯ ಹಿಂಬದಿ ಬೆಳೆದು ನಿಂತಿದ್ದ ಬೃಹತ್ ಗಾತ್ರ ಬೇವಿನ ಮರವು ಬಿರುಗಾಳಿಯ ಒತ್ತಡಕ್ಕೆ ಸಿಲುಕಿ ಬುಡಸಮೇತ ಮನೆಯ ಮೇಲೆ ಉರುಳಿ ಬಿದ್ದಿರುವುದರಿಂದ ರಾಮಕೃಷ್ಣೇಗೌಡ ಅವರ ಮನೆಯು ಭಾಗಶಃ ಜಖಂಗೊಂಡಿದೆ.
ಸ್ಥಳಕ್ಕೆ ಕಿಕ್ಕೇರಿ ನಾಡಕಚೇರಿಯ ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ಕಿಕ್ಕೇರಿ ಹೋಬಳಿ ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಚೌಡೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಮತಾಕುಮಾರ್ ಭೆೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಭಾರೀ ಬಿರುಗಾಳಿ ಬೀಸುತ್ತಿದ್ದು ಅಲ್ಲಲ್ಲಿ ತೆಂಗಿನ ಮರಗಳು, ಅಡಿಕೆ ಮರಗಳು ಹಾಗೂ ಇತರೆ ಮರಗಳು ಬುಡಸಮೇತ ಉರುಳಿ ಬೀಳುತ್ತಿವೆ. ಅದೇ ರೀತಿಯಲ್ಲಿ ಚೌಡೇನಹಳ್ಳಿ ಅತಿ ಸಣ್ಣ ರೈತ ಕುಟುಂಬದ ರಾಮಕೃಷ್ಣೇಗೌಡ ಅವರ ವಾಸದ ಮನೆಯ ಮೇಲೆ ಭಾರೀ ಗಾತ್ರ ಬೇವಿನ ಮರವು ಉರುಳಿ ಬಿದ್ದಿದ್ದು ಇದರ ದುರಸ್ತಿಗೆ ಸುಮಾರು 1ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತದೆ ಹಾಗಾಗಿ ಜಿಲ್ಲಾಡಳಿತವು ರೈತ ರಾಮಕೃಷ್ಣೇಗೌಡ ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಚೌಡೇನಹಳ್ಳಿ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.