ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 32ರಲ್ಲಿ ಶಾಂತಿನಗರ ಕಲ್ಲುದೊಡ್ಡಿ ವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ಸ ಕಲ್ಲುದೊಡ್ಡಿಯ ವಿವೇಕಾನಂದ ಯುವಕ ಸಂಘದ ನೇತೃತ್ವದಲ್ಲಿ ಸ್ಥಳೀಯರು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಕಲ್ಲುದೊಡ್ಡಿ ಬಡಾವಣೆಯು ಕಳೆದ 20 ವರ್ಷಗಳ ಹಿಂದೆಯೇ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಈಗಾಗಲೇ 4 ಮಂದಿ ನಗರಸಭೆ ಸದಸ್ಯರು 32ನೇ ವಾರ್ಡ್ ನ್ನು ಪ್ರತಿನಿಧಿಸಿದ್ದಾರೆ. ಆದರೆ ಈ ತನಕ ಯಾವುದೇ ಜನಪ್ರತಿನಿಧಿಗಳೂ ಕೂಡ ಇಲ್ಲಿನ ಸಮಸ್ಯೆ ಪರಿಹರಿಸಲು ಕಾಳಜಿ ವಹಿಸಿಲ್ಲ. ಇಲ್ಲಿನ ಜನರಿಗೆ ತಿಂಗಳಿಗೊಮ್ಮೆ ನೀರು ಬರುತ್ತಿದ್ದು, ವಾರದಲ್ಲಿ ಎರಡು ದಿನವಾದರೂ ಕುಡಿಯುವ ನೀರು ಪೂರೈಕೆ ಮಾಡಬೇಕು. ಇಲ್ಲಿನ ಕೊಳವೆ ಬಾವಿ ದುರಸ್ಥಿಯಾಗದೇ ಆರು ತಿಂಗಳು ಕಳೆದಿದೆ.
ಬೀದಿ ದೀಪಹಾಳಾಗಿ ಹಲವು ತಿಂಗಳುಗಳು ಕಳೆದಿವೆ. ರಾತ್ರಿ ವೇಳೆ ಹೆಂಗಸರು, ಮಕ್ಕಳು ಹಾದಿ ಬೀದಿಯಲ್ಲಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ಚರಂಡಿಯು ಕೊಳಚೆಯಿಂದ ಕೂಡಿದೆ. ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಮಲೇರಿಯಾ, ಕಾಲರಾ, ಡೆಂಗ್ಯೂ, ಚಿಕುನ್ ಗುನ್ಯಾ, ಜ್ವರ, ವಾಂತಿ, ಬೇದಿ ಮುಂತಾದ ಖಾಯಿಲೆಗಳಿಗೆ ಇಲ್ಲಿ ಕಾರಣವಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಶೆ.40ರಷ್ಟು ಮಂದಿ ಇಲ್ಲಿನವರೇ ಆಗಿದ್ದಾರೆ ಎಂದಿದ್ದಾರೆ. ಇಂತಹ ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಇಲ್ಲಿನ ಜನರು ನರಕಯಾತನೆಯನ್ನು ಅನುಭವಿಸುವಂತಾಗಿದೆ. ಕಳೆದ ಆರು ತಿಂಗಳಿನಿಂದ ಹಲವು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆ ಜನಪ್ರತಿನಿಧಿಗಳು ಕೇವಲ ಮನರಂಜನೆ, ಕ್ರೀಡೆಗಳತ್ತ ಗಮನಹರಿಸುತ್ತಿದ್ದಾರೆಯೇ ಹೊರತು ಮೂಲಸೌಕರ್ಯ ಒದಗಿಸಲು ಮುತುವರ್ಜಿ ವಹಿಸುತ್ತಿಲ್ಲ. ಆದ್ದರಿಂದ ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.