ಮಡಿಕೇರಿ: ಬಂಡವಾಳ ಶಾಹಿಗಳ ಏಕರೆಗಟ್ಟಲೆ ಜಮೀನನ್ನು ಸುಲಭವಾಗಿ ಭೂ ಪರಿವರ್ತನೆ ಮಾಡುವ ಜಿಲ್ಲಾಡಳಿತ 5 ರಿಂದ 15 ಸೆಂಟ್ಸ್ ಸಣ್ಣ ಪುಟ್ಟ ಜಾಗಗಳನ್ನು ಪರಿವರ್ತನೆಗೊಳಿಸದೆ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದೆ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ, ಭೂ ಪರಿವರ್ತನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಕರ್ತವ್ಯ ಲೋಪವೆಸಗುತ್ತಿದ್ದಾರೆ. ಜಿಲ್ಲೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಂಘಟಿತರಾಗಿ ಕೇಸ್ ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊಡಗಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಇತರ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ. ಜನ ಸಾಮಾನ್ಯರ ಕಡತಗಳು ವಿಲೇವಾರಿಯಾಗದೆ ಇರುವುದರಿಂದ ಸಣ್ಣ ಪುಟ್ಟ ಮನೆಗಳನ್ನು ನಿರ್ಮಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಮುಂದಿನ ಒಂದು ವಾರದ ಒಳಗೆ ಕಡತ ವಿಲೇವಾರಿ ಆಗದಿದ್ದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕೇಂದ್ರ ಮತ್ತು ರಾಜ್ಯದ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಬಿ.ಎಂ.ಜಿನ್ನು ನಾಣಯ್ಯ ಮಾತನಾಡಿ, ಅಪರ ಜಿಲ್ಲಾಧಿಕಾರಿಗಳು ಕಡತ ವಿಲೇವಾರಿಯಲ್ಲಿ ನಿರ್ಲಕ್ಷ್ಯತೆ ತೋರುತ್ತಿದ್ದು, ನಿಮ್ಮ ಕಡತವಿದ್ದರೆ ತನ್ನಿ ಎಂದು ಹೋರಾಟಗಾರರ ಕಡತವನ್ನು ಮಾತ್ರ ವಿಲೆೇವಾರಿ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ತಹಸೀಲ್ದಾರ್ ಆಗಿದ್ದ ಕುಂಞಮ್ಮ ಅವರ ಅವಧಿಯಲ್ಲಿ ಕಂದಾಯ ಇಲಾಖೆಯ ಕಡತಗಳು ನಾಪತ್ತೆಯಾಗಿದ್ದು, ದೂರು ನೀಡಿ ನಾಲ್ಕು ತಿಂಗಳು ಕಳೆದಿದ್ದರೂ ಕಡತಗಳನ್ನು ಪತ್ತೆ ಮಾಡಿಲ್ಲ. ಕುಂಞಮ್ಮ ಅವರ ಪ್ರಕರಣದಲ್ಲಿ ಅಪರ ಜಿಲ್ಲಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳಿಗೆ ಕೊಡಗಿನ ಕಂದಾಯ ಭೂಮಿಯ ನಿಯಮಗಳ ಬಗ್ಗೆ ಯಾವುದೇ ತಿಳುವಳಿಗೆ ಇಲ್ಲವೆಂದು ಜಿನ್ನು ನಾಣಯ್ಯ ಟೀಕಿಸಿದರು. ಸರ್ಕಾರಿ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಕೆ.ಎ. ಸೂಫಿ, ಮುನೀರ್ ಮಾಚರ್ ಮತ್ತು ಅನಿತಾ ಉಪಸ್ಥಿತರಿದ್ದರು. ಫೋಟೋ :: ಮಾನವ ಹಕ್ಕು