ಮಂಡ್ಯ: ಜೈಲಿನಲ್ಲೇ ಕೂತು ಮಹಿಳಾ ಡಾನ್ ನ ಸಂಪರ್ಕ ಸಾಧಿಸಿ ಆಕೆ ಮೂಲಕ ಮಾರ್ಕೇಟ್ ಕುಮಾರ ಎಂಬಾತನ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣ ಮಂಡ್ಯ ಜೈಲಲ್ಲಿ ಬಯಲಾಗಿದೆ.
ಕಾಂಗ್ರೆಸ್ ಮುಖಂಡ, ಅಬಕಾರಿ ಉದ್ಯಮಿ ಆಗಿದ್ದ ಎಚ್.ಪಿ.ನಾಗೇಂದ್ರ ಕೊಲೆ ಆರೋಪಿ ಶಿವು ಅಲಿಯಾಸ್ ಡೇಂಜರ್ ಶಿವು ಎಂಬಾತನೇ ಜೈಲ್ ನಲ್ಲಿ ಕೂತು ಹತ್ಯೆಗೆ ಸ್ಕೆಚ್ ಹಾಕಿದ ಆರೋಪಿ. ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಮೈಸೂರಿನ ಜೈಲ್ ನಲ್ಲಿರುವ ಭಾಗ್ಯ ಎಂಬಾಕೆಯ ಸಂಪರ್ಕದಲ್ಲಿದ್ದುಕೊಂಡು ಮಾರ್ಕೆಟ್ ಕುಮಾರನ ಎತ್ತಲು ತಯಾರಿ ನಡೆಸಿದ್ದನು. ಮಂಡ್ಯ ಜೈಲಿಗೆ ಇತ್ತೀಚೆಗೆ ಪೊಲೀಸರು ದಾಳಿ ಮಾಡಿದ ಸಂದರ್ಭ ಶಿವು ಬಳಿ ಸಿಕ್ಕಿದ್ದ ಮೊಬೈಲ್ ನಲ್ಲಿ ಆಕೆಯ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು. ಮಹಿಳಾ ಡಾನ್ ಭಾಗ್ಯಳನ್ನು ಇದೀಗ ಮಂಡ್ಯ ಪೂರ್ವ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಶಿವುನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಷ್ಟಕ್ಕೂ ಶಿವು ಜೈಲಿನಲ್ಲೇ ಕುಳಿತು ಇದನ್ನೆಲ್ಲ ಮಾಡಲು ಸಾಧ್ಯವಾಯಿತು ಎಂಬುದಕ್ಕೆ ಕಾರಣವೂ ಇದೆ. ಈತನಿಗೆ ಮೊಬೈಲ್ ಮತ್ತು ಗಾಂಜಾ ಸರಬರಾಜಾಗಲು ಜೈಲ್ ಅಧೀಕ್ಷಕ ಸತೀಶ್ ಎಂಬುವರು ಸಹಾಯ ಮಾಡಿದ್ದಾರೆ ಎಂಬ ಆರೋಪ ಬಂದಿದೆ.
ಜೈಲ್ ಅಧೀಕ್ಷಕ ಅಮಾನತು
ಸದ್ಯ ಜೈಲ್ ಅಧೀಕ್ಷಕ ಸತೀಶ್ ಅಮಾನತಾಗಿದ್ದಾರೆ. ಇವರು ಮುಖ್ಯಮಂತ್ರಿ ಪದಕ ಪುರಸ್ಕೃತರಾಗಿದ್ದು, ಮಂಡ್ಯ ಜೈಲಿನೊಳಗೆ ಮೊಬೈಲ್ ಗಾಂಜಾ ಸರಬರಾಜು ಅಲ್ಲದೆ, ಖೈದಿ ಶಿವುಗೆ ಕಾನೂನು ಉಲ್ಲಂಘಿಸಿ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿರುವ ಆರೋಪ ಇವರ ಮೇಲೆ ಇದೆ. ಜೈಲ್ ನಲ್ಲಿ ಅಕ್ರಮಗಳು ನಡೆಯುತ್ತಿವೆ ಗಾಂಜಾ, ಮದ್ಯ ಬಳಕೆಯಾಗುತ್ತಿದೆ. ಹಣ ಕೊಟ್ಟರೆ ಜೈಲ್ ನಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.
ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಕಾರಾಗೃಹಕ್ಕೆ ಇತ್ತೀಚೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ದಾಳಿಯ ಸಂದರ್ಭ ಜೈಲ್ ನಲ್ಲಿ ಖೈದಿಗಳ ಬಳಿ ಗಾಂಜಾ, ಮೊಬೈಲ್ ಮೊದಲಾದವು ಪತ್ತೆಯಾಗಿದ್ದವು. ಇದನ್ನು ವಶಪಡಿಸಿಕೊಂಡು ವರದಿಯನ್ನು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸಲ್ಲಿಸಲಾಗಿತ್ತು. ಇದನ್ನು ಎಸ್ಪಿ ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿ ಆಧಾರದ ಮೇರೆಗೆ ಬಂಧಿಖಾನೆ ಡಿಜಿ ಸುಬ್ರಹ್ಮಣ್ಯ ಅವರು ಜೈಲು ಅಧೀಕ್ಷಕ ಸತೀಶ್ ಅವರನ್ನು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.