ಮಡಿಕೇರಿ: ದೇಶದ ಸೇನಾ ಕ್ಷೇತ್ರಕ್ಕೆ ನೂರಾರು ವೀರ ಯೋಧರನ್ನು ನೀಡುತ್ತಿರುವ ಕೊಡಗು ಜಿಲ್ಲೆಯಲ್ಲಿ ಹುತಾತ್ಮರ ಸ್ಮರಣೆ ಎಂದೆಂದಿಗೂ ಅಮರ. ರಾಷ್ಟ್ರದ ಗಡಿಗಳನ್ನು ಜೀವದ ಹಂಗು ತೊರೆದು ಕಾಯುವ ಯೋಧನ ಪ್ರತಿಮೆಯನ್ನು ಹೊಂದಿದ ಯುದ್ಧ ಸ್ಮಾರಕ ಮತ್ತು ‘ರಾಷ್ಟ್ರ ಲಾಂಛನ ಸ್ತಂಭ’ವನ್ನು ಹಸಿರ ಪರಿಸರದ ಚೇರಂಗಾಲ ಗ್ರಾಮದಲ್ಲಿ ಅನಾವರಣಗೊಳಿಸಲಾಯಿತು.
ಕಾವೇರಿ ಜನ್ಮಭೂಮಿ ಟ್ರಸ್ಟ್ ವತಿಯಿಂದ ಚೇರಂಗಾಲದ ತಳಾರಬಾಣೆಯಲ್ಲಿ 10ನೇ ವರ್ಷದ ತವರೂರ ಕೂಟ ನಡೆಯಿತು. ಈ ಸಂದರ್ಭ ಅಂದಾಜು 40 ರಿಂದ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಯುದ್ಧ ಸ್ಮಾರಕದ ಸೈನಿಕನ ಪ್ರತಿಮೆಯನ್ನು ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಪಿವಿಎಸ್ಎಂ, ವಿಎಂ ಅವರು ಉದ್ಘಾಟಿಸಿದರು. ರಾಷ್ಟ್ರ ಲಾಂಛನ ಸ್ತಂಭವನ್ನು ಟೊಯೋಟೋ ಕಿರ್ಲೋಸ್ಕರ್ ಸಂಸ್ಥೆಯ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕೆ. ಸ್ವಾಮಿ ಅನಾವರಣಗೊಳಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಯುದ್ಧ ಕಾಲದಲ್ಲಷ್ಟೆ ನಾವು ದೇವರು ಹಾಗೂ ಯೋಧರನ್ನು ಸ್ಮರಿಸಿಕೊಳ್ಳುತ್ತೇವೆ. ಬಳಿಕ ಇವರನ್ನು ಮರೆತು ಬಿಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು. ಸೈನ್ಯದ ಮೂರು ವಿಭಾಗಗಳನ್ನು ಪ್ರತಿನಿಧಿಸುವ ಯೋಧನ ಸ್ಮಾರಕವನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸುವ ಮೂಲಕ ಯುವ ಸಮೂಹದಲ್ಲಿ ಸ್ಫೂರ್ತಿ ತುಂಬುವ ಕಾರ್ಯ ಮಾಡಿರುವುದು ಶ್ಲಾಘನೀಯವೆಂದರು.
ಪರಿಸರವನ್ನು ಉಳಿಸಿ:
ಕಾವೇರಿಯ ನಾಡು ಕೊಡಗಿನಲ್ಲಿ ಭತ್ತದ ಕೃಷಿ ಭೂಮಿಗಳು ಮನೆ ನಿವೇಶನಗಳಾಗಿ ಪರಿವರ್ತನೆಯಾಗುವ ಮೂಲಕ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಇದರೊಂದಿಗೆ ಇದೀಗ ರೈಲ್ವೆ ಯೋಜನೆ, ಚತುಷ್ಪಥ ರಸ್ತೆ ಯೋಜನೆಗಳು ಕೇಳಿ ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಇಂತಹ ಪರಿಸ್ಥಿತಿಗಳ ನಡುವೆ ಮುಂದಿನ ಪೀಳಿಗೆಗೆ ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲೆಫ್ಟಿನೆಂಟ್ ಜನರಲ್ ಕದಂಬಿ ಮಾತನಾಡಿ, ಅತ್ಯಂತ ಸುಂದರ ಪರಿಸರದ ನಡುವೆ ಯೋಧನ ಸ್ಮಾರಕದ ಅನಾವರಣ ಅತ್ಯಂತ ಅರ್ಥಪೂರ್ಣವಾಗಿದೆ. ಗಡಿಗಳನ್ನು ಕಾಯುವ ರೀತಿಯಲ್ಲಿ ಹಸಿರ ಪರಿಸರವನ್ನು ಕೂಡ ಸಂರಕ್ಷಿಸಬೇಕಾಗಿದ್ದು, ಈ ರೀತಿಯ ಸಂದೇಶ ಅಗತ್ಯವೆಂದರು.
ರಾಷ್ಟ್ರ ಲಾಂಛನ ಸ್ತಂಭವನ್ನು ಅನಾವರಣಗೊಳಿಸಿದ ಟೊಯೋಟೋ ಕಿರ್ಲೋಸ್ಕರ್ ಸಂಸ್ಥೆಯ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಕೆ. ಸ್ವಾಮಿ, ಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ಹೊರ ಬರುವವರಿಗೆ ಅಮೆರಿಕಾದಂತಹ ದೇಶಗಳಲ್ಲಿ ಅಪಾರ ಗೌರವವಿದೆ. ಅವರನ್ನು ವಿವಿಧ ಕ್ಷೇತ್ರಗಳ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ. ಭಾರತದಲ್ಲಿಯೂ ಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರ ಸ್ಥಾನಮಾನಗಳಿಗೆ ಅನುಗುಣವಾಗಿ ಕೆಲಸವನ್ನು ಒದಗಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ಕಾನೂನು ರೂಪಿಸುವಂತಾಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಯುದ್ಧ ಸ್ಮಾರಕ ಸ್ಥಾಪನೆಯನ್ನು ಶ್ಲಾಘಿಸಿದರು. ಜಿಲ್ಲೆಯ ನಿವಾಸಿಗಳು ಯಾವುದೇ ಕಾರಣಕ್ಕು ನಮ್ಮ ಭೂಮಿಯನ್ನು ಇತರರಿಗೆ ಮಾರಾಟಮಾಡದೆ, ಇಲ್ಲಿನ ಸಂಸ್ಕೃತಿಯ ಸಂರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಮತ್ತೋರ್ವ ಅತಿಥಿ ಮಡಿಕೆೇರಿ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಸೈನ್ಯದಲ್ಲಿ ಸೇವೆ ಸಲ್ಲಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಮೂಡಬೇಕೆಂದರು. ಸೈನಿಕರ ಕುಟುಂಬಕ್ಕೆ ನೆರವಾಗಿ ನಿಲ್ಲುವ ಮನೋಸ್ಥಿತಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕೆಂದರು.
ಬೆಂಗಳೂರಿನ ಉದ್ಯಮಿ ರಮೇಶ್ ಜಿ. ಪಾಟೀಲ್ ಉಪಸ್ಥಿತರಿದ್ದರು. ಕಾವೇರಿ ಜನ್ಮಭೂಮಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಸಿ. ರವಿ ಕುಮಾರ್ ಸ್ವಾಗತಿಸಿದರು. ಮೊಟ್ಟನ ಜ್ಯೋತಿ ಶಂಕರ್ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟಿ ಮತ್ತಾರಿ ರಾಜ ವಂದಿಸಿದರು.