ಮಡಿಕೇರಿ: ಐದು ಸೆಂಟ್ ನಿವೇಶನದೊಂದಿಗೆ ತಲಾ 2 ಎಕರೆ ಭೂಮಿಯನ್ನು ನೀಡುವ ಕುರಿತು ಜಿಲ್ಲಾಡಳಿತ ಲಿಖಿತ ರೂಪದಲ್ಲಿ ಭರವಸೆ ನೀಡುವಲ್ಲಿಯವರೆಗೆ ಆದಿವಾಸಿಗಳು ದಿಡ್ಡಳ್ಳಿಯನ್ನು ಬಿಡುವುದಿಲ್ಲವೆಂದು ಆದಿವಾಸಿ ಹೋರಾಟಗಾರರಾದ ಜೆ.ಕೆ.ಅಪ್ಪಾಜಿ ಹಾಗೂ ಜೆ.ಕೆ.ಮುತ್ತಮ್ಮ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಕೆ.ಅಪ್ಪಾಜಿ, ಜಿಲ್ಲಾಡಳಿತ ಕೇವಲ ಒಂದಿಬ್ಬರು ಆದಿವಾಸಿಗಳನ್ನು ಕರೆದು ನಿವೇಶನ ಹಂಚಿಕೆಯ ಕುರಿತು ಚರ್ಚಿಸುವ ಮೂಲಕ ದಿಡ್ಡಳ್ಳಿಯನ್ನು ಬಿಡುವಂತೆ ಮತ್ತು ಪುನರ್ವಸತಿಗಳಿಗೆ ತೆರಳುವಂತೆ ಸೂಚಿಸಿದೆ. ಈ ಬೆಳವಣಿಗೆ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಹೋರಾಟಗಾರರೇ ಆದಿವಾಸಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾನೂನಿನ ಅರಿವಿರುವ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ ಅವರು ಕೂಡ ಹಾದಿ ತಪ್ಪಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ದಿಡ್ಡಳ್ಳಿರುವುದು ಅರಣ್ಯ ಅಥವಾ ಕಂದಾಯ ಭೂಮಿಯೇ ಎಂಬುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುವುದಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಹೇಳಿದ್ದರು. ಆದರೆ ಜಿಲ್ಲಾಡಳಿತ ಏಕಾಏಕಿ ಕೇವಲ 2-3 ಮಂದಿ ಆದಿವಾಸಿಗಳನ್ನು ಕರೆದು ಸಭೆ ನಡೆಸುವ ಮೂಲಕ ಪುನರ್ವಸತಿ ಪ್ರದೇಶಕ್ಕೆ ತೆರಳುವಂತೆ ಸೂಚಿಸಿರುವುದು ಎಷ್ಟು ಸರಿ ಎಂದು ಜೆ.ಕೆ.ಅಪ್ಪಾಜಿ ಪ್ರಶ್ನಿಸಿದರು.
ದಿಡ್ಡಳ್ಳಿ ಪ್ರದೇಶದಲ್ಲಿ ನಿವೇಶನ ನೀಡುವುದಾದರೆ 5 ಸೆಂಟ್ ಜಾಗದೊಂದಿಗೆ ಎರಡು ಎಕರೆ ಭೂಮಿಯನ್ನು ಕೂಡ ನೀಡಬೇಕೆಂದು ಒತ್ತಾಯಿಸಿದರು. ಆರಂಭದಲ್ಲಿ ಈ ಭಾಗದಲ್ಲಿ 250 ಕ್ಕೂ ಅಧಿಕ ಕುಂಟುಂಬಗಳಿದ್ದವು. ಇತ್ತೀಚೆಗೆ ಲೈನ್ಮನೆಯಲ್ಲಿದ್ದವರು ಕೂಡ ಬಂದು ನೆಲೆಸಿದ್ದು, ಒಟ್ಟು 577 ಕುಟುಂಬಗಳಿವೆ ಎಂದು ಅಪ್ಪಾಜಿ ತಿಳಿಸಿದರು. ದಿಡ್ಡಳ್ಳಿಯಲ್ಲೇ ನಿವೇಶನ ನೀಡಬೇಕೆಂದು ಒತ್ತಾಯಿಸಿದ ಅವರು ಅನಾದಿ ಕಾಲದಿಂದಲೂ ಇಲ್ಲೇ ನೆಲೆಸಿರುವವರು ಅನೇಕರಿದ್ದು, ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧವೆಂದರು. ಅರಣ್ಯ ಇಲಾಖೆ ಆದಿವಾಸಿಗಳನ್ನು ಅತಂತ್ರಗೊಳಿಸಿದ್ದೇ ಈ ಬೆಳವಣಿಗೆಗೆ ಕಾರಣವೆಂದು ಅಪ್ಪಾಜಿ ಆರೋಪಿಸಿದರು.
ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ ಮಾತನಾಡಿ, ಆದಿವಾಸಿಗಳ ದಿಕ್ಕು ತಪ್ಪಿಸಿದ ಎ.ಕೆ.ಸುಬ್ಬಯ್ಯ ಹಾಗೂ ಡಿ.ಎಸ್.ನಿರ್ವಾಣಪ್ಪ ಅವರನ್ನು ದಿಡ್ಡಳ್ಳಿ ಹಾಡಿಯೆಡೆಗೆ ನುಸುಳಲು ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಪುನರ್ವಸತಿ ಕೇಂದ್ರ ಅಥವಾ ಲೈನ್ಮನೆಗಳಿಗೆ ತೆರಳಿ ಎಂದು ಒತ್ತಡ ಹೇರುತ್ತಿದೆ. ಇಂಥ ಸಂದರ್ಭದಲ್ಲಿ ಹೋರಾಟಗಾರರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಈಗ ಗುರುತಿಸಿರುವ ಜಾಗದಲ್ಲಿ ಜಿಲ್ಲಾಡಳಿತ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸುತ್ತಿದೆ. ಇದರ ಅಗತ್ಯ ನಮಗಿಲ್ಲವೆಂದ ಮುತ್ತಮ್ಮ, ನಾಲ್ಕು ಲಕ್ಷ ರೂ. ವೆಚ್ಚದ ಶಾಶ್ವತ ಮನೆ ನೀಡಬೇಕು ಮತ್ತು ಎರಡು ಎಕರೆ ಜಮೀನನ್ನು ಎಲ್ಲಿ, ಯಾವಾಗ ನೀಡುತ್ತದೆ ಎನ್ನುವ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟತೆ ಬೇಕೆಂದು ಒತ್ತಾಯಿಸಿದರು.
ನನಗೆ ಭೂಮಿ ಇದೆ ಎಂದು ಅನೇಕರು ವಾದಿಸುತ್ತಾರೆ, ಆದರೆ ನಾನು ಹೋರಾಟದ ಮೂಲಕವೇ ನನ್ನ ಹಕ್ಕಿನ ಭೂಮಿಯನ್ನು ಪಡೆದಿದ್ದು, ನನ್ನ ಸಮುದಾಯಕ್ಕೆ ಹೋರಾಟದಿಂದಲೇ ಭೂಮಿ ದೊರಕಿಸಿ ಕೊಡುವುದಾಗಿ ಮುತ್ತಮ್ಮ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಕೂಡ ಆದಿವಾಸಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಮುಂದಿನ ಒಂದು ತಿಂಗಳೊಳಗೆ ಸರಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಡಿ ನಿವಾಸಿಗಳಾದ ಮಲ್ಲು, ಮಂಜುಳ, ಬೋಜಮ್ಮ ಹಾಗೂ ಕಾಳಿ ಉಪಸ್ಥಿತರಿದ್ದರು.