ಚಾಮರಾಜನಗರ: ಸಾಮಾನ್ಯವಾಗಿ ಅರಣ್ಯ ಎಂದ ಮೇಲೆ ಅಲ್ಲಿ ಪ್ರಾಣಿಗಳ ಬೇಟೆ, ಮರಕಳ್ಳತನ ಮಾಡಲು ದುಷ್ಕರ್ಮಿಗಳು ಕಾಯುತ್ತಲೇ ಇರುತ್ತಾರೆ. ಅರಣ್ಯ ಸಿಬ್ಬಂದಿ ಎಷ್ಟೇ ಜಾಗರೂಕತೆಯಿಂದ ಪಹರೆ ಕಾದರೂ ಅಲ್ಲಲ್ಲಿ ಬೇಟೆ, ಕಳ್ಳತನ ನಡೆಯುತ್ತಲೇ ಇರುತ್ತದೆ.
ಇತ್ತೀಚೆಗೆ ಇಂತಹ ಕೃತ್ಯಗಳು ಬಂಡೀಪುರ ಅರಣ್ಯದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ರಾಯಭಾರಿ ಪ್ರಿನ್ಸ್ ಹುಲಿಯ ಮುಖವನ್ನು ಕಡಿದು ಹಲ್ಲನ್ನು ಹೊತ್ತೋಯ್ದ ಪ್ರಕರಣ ನಡೆದಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಅದಕ್ಕೆ ಕಡಿವಾಣ ಹಾಕಲೆಂದೇ ಇತ್ತೀಚೆಗೆ ಇಲ್ಲಿಗೆ ರಾಣಾ ಬಂದಿದ್ದಾನೆ ಈತ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ನೇಹಿತನಾಗಿ ಕಾಡುಗಳ್ಳರು, ಬೇಟೆಗಾರರಿಗೆ ದುಸ್ವಪ್ನವಾಗಿ ರಾಣಾ ಕಂಡು ಬರುತ್ತಿದ್ದಾನೆ.
ಇಷ್ಟಕ್ಕೂ ರಾಣಾ ಯಾರಿರಬಹುದು ಎಂಬ ಆಲೋಚನೆ ಬಂದಿರಬಹುದಲ್ಲವೆ ಇಲ್ಲಿದೆ ನೋಡಿ ರಾಣಾನ ಬಗ್ಗೆ ಒಂದಿಷ್ಟು ಕುತೂಹಲಕಾರಿ ವಿಚಾರಗಳು. ರಾಣಾ ಎನ್ನುವುದು ಜರ್ಮನ್ಶಫರ್ಡ್ ಶ್ವಾನ ಇದೀಗ ಇದಕ್ಕೆ ಮೂರು ವರ್ಷ ಮೂರು ತಿಂಗಳ ಪ್ರಾಯ. ಮಧ್ಯಪ್ರದೇಶದ ಭೂಪಾಲ್ ನ 23ನೇ ಬೆಟಾಲಿಯನ್ ಆಫ್ ಸ್ಪೆಷಲ್ ಆಮ್ರಿಸರ್ವ ಫೋರ್ಸ್ ನಲ್ಲಿ ಕಠಿಣ ತರಬೇತಿ ಪಡೆದು ಬಂದಿದೆ. ಇದು ಮರಗಳ್ಳರ ಪತ್ತೆ, ಹುಲಿ, ಚಿರತೆ ಚರ್ಮ ಸಾಗಾಣಿಕೆ, ಹುಲಿ ಉಗುರು, ಆನೆ ದಂತ, ಜೆಂಕೆ, ಕಾಡು ಹಂದಿಗಳ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರನ್ನು ಪತ್ತೆ ಹಚ್ಚುವಲ್ಲಿ ನಿಪುಣತೆ ಪಡೆದುಕೊಂಡಿದೆ.
ಬಂಡೀಪುರಕ್ಕೆ ರಾಣಾನನ್ನು ನೀಡಿದ್ದು, ವಿಶ್ವ ವನ್ಯಜೀವಿ ನಿಧಿ ಹಾಗೂ ಟ್ರಾಫಿಕ್ ಇಂಡಿಯಾ ಸಂಸ್ಥೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ತನಗೆ ನೀಡುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅರಣ್ಯ ರಕ್ಷಕ ಪ್ರಕಾಶ್ ಎಂಬುವರು ಇದನ್ನು ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಬಂಡೀಪುರದ ಮೇಲುಕಾಮನಹಳ್ಳಿಯ ಎಸ್ಟಿಎಫ್ ವಸತಿಗೃಹದಲ್ಲಿ ವಾಸ್ತವ್ಯವಿದ್ದು, ಬೆಳಗ್ಗೆ ಒಂದು ಲೀಟರ್ ಹಾಲು ಅಥವಾ ಮೊಸರು, ಸಂಜೆ 250 ಗ್ರಾಂ ಮಾಂಸದ ನಡುವೆ ರಾಯಲ್ ಡಾಗ್ ಫುಡ್ ನೀಡಲಾಗುತ್ತದೆ. ಇನ್ನು ಮುಂದೆ ನಾಗರಹೊಳೆ ಅಭಯಾರಣ್ಯ, ಬಿಳಿಗಿರಿರಂಗನಬೆಟ್ಟ ಹಾಗೂ ಕಾಳಿ ಸಂರಕ್ಷಿತ ಪ್ರದೇಶದಲ್ಲಿಯೂ ಪತ್ತೇದಾರ ಶ್ವಾನವನ್ನು ಬಳಸಿಕೊಳ್ಳಲು ಚಿಂತನೆ ನಡೆದಿದ್ದು ಇದಕ್ಕೆ ಕಾರಣ ರಾಣಾ ಮಾಡಿದ ಪತ್ತೆದಾರಿಕೆ ಎಂದರೆ ಅತಿಶಯೋಕ್ತಿಯಾಗಲಾರದು.
ಏಕೆಂದರೆ ರಾಣಾ ಬಂಡೀಪುರಕ್ಕೆ ಬಂದ ಬಳಿಕ ಎನ್.ಬೇಗೂರಿನಲ್ಲಿ ತೇಗದ ಮರ ಕಳ್ಳರ ಮತ್ತು ಬಂಡೀಪುರದ ವಿಂಡ್ ಫ್ಲವರ್ ಬಳಿ ಶ್ರೀಗಂಧದ ಮರಕಳ್ಳರ ಪತ್ತೆ ಹಚ್ಚಿದ್ದರೆ, ತಮಿಳುನಾಡಿನ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್ನಲ್ಲಿ ಕಾವಲುಗಾರನ ರುಂಡದೊಂದಿಗೆ ಪರಾರಿಯಾಗಿದ್ದ ನರಭಕ್ಷಕ ಹುಲಿಯನ್ನು ಹುಡುಕಿದ್ದು, ಹಂಚೀಪುರ ಗ್ರಾಮದಲ್ಲಿ ಅಪರೂಪದ ಕಪ್ಪು ಚಿರತೆಗೆ ವಿಷಪ್ರಾಶನ ಮಾಡಿದ್ದ ಪ್ರಕರಣ ಬೇಧಿಸಿ ವ್ಯಕ್ತಿಯನ್ನು ಬಂಧಿಸುವಲ್ಲಿಯೂ ಈತನ ಪಾತ್ರವಿದೆ. ಇನ್ನು ಶ್ರೀರಂಗಪಟ್ಟಣದ ಬಳಿ 60 ಕೆ.ಜಿ. ಶ್ರೀಗಂಧ ಕದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾನೆ. ಇದೆಲ್ಲವನ್ನು ಗಮನಿಸಿದರೆ ಇಂತಹ ಶ್ವಾನಗಳು ಅರಣ್ಯ ಇಲಾಖೆಗೆ ಅಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ