ಮಂಡ್ಯ: ಪಂಚಲೋಹದ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಮುಂದಾಗಿದ್ದ ದಕ್ಷಿಣಕನ್ನಡ ಜಿಲ್ಲೆಯವರು ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಐನೆಕ್ಕಿದು ಗ್ರಾಮದ ಎನ್.ಎಂ.ಸುಜನ್, ದರ್ಬೆಯ ಲಕ್ಷ್ಮಿ ಲೇಔಟ್ ನ ಮಹಮದ್ ಸುನೀಪ್, ಕರಿಯಂಗಳ ಮನೆಯ ಮಹಮ್ಮದ್ ಬಸೀರ್, ಮಂಡ್ಯದ ನೆಹರು ನಗರದ ಗೋವಿಂದರಾಜು, ತಾವರೆಗೆರೆಯ ಮುಜಾಬ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಲ್ಕರೆ ಗ್ರಾಮದ ಬಾಲರಾಜು, ಹಾಸನದ ಹೊಯ್ಸಳ ನಗರದ ಪುಟ್ಟಸ್ವಾಮಿ, ಬೆಂಗಳೂರಿನ ಬೆನಷನ್ ಟೌನ್ ನ ರಫೀವುದ್ದೀನ್ ಬಂಧಿತರಾಗಿದ್ದಾರೆ.
ಈ ಎಂಟು ಮಂದಿ ಮಂಡ್ಯ ನಗರಕ್ಕೆ ಬಂದು ಪ್ರಿನ್ಸ್ ಲಾಡ್ಜ್ ನ 208ನೇ ಕೊಠಡಿಯಲ್ಲಿ ತಂಗಿದ್ದರಲ್ಲದೆ, ಇಲ್ಲಿಯೇ ಕುಳಿತು ಲಕ್ಷಾಂತರ ರೂ. ಬೆಳೆಬಾಳುವ ಶ್ರೀಕೃಷ್ಣನ ವಿಗ್ರಹವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಶ್ಚಿಮ ಠಾಣೆ ಪೊಲೀಸರಿಗೆ ಸಿಕ್ಕಿದ್ದು ತಕ್ಷಣವೇ ದಾಳಿ ನಡೆಸಿದ್ದರಿಂದ ಆರೋಪಿಗಳು ಶ್ರೀಕೃಷ್ಣನ ಪಂಚಲೋಹದ ವಿಗ್ರಹದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.