ಮೂಡಿಗೆರೆ: ಕಳೆದ 2 ವರ್ಷಗಳ ಹಿಂದೆ ಜನ್ನಾಪುರ-ವಣಗೂರು ರಾಜ್ಯ ಹೆದ್ದಾರಿ ರಸ್ತೆಯನ್ನು ಮರು ಡಾಂಬರೀಕರಣ ಮಾಡಿದ್ದು, ಗುಂಡಿ ಬಿದ್ದಿದ್ದರೂ ಗುತ್ತಿಗೆದಾರರು ನಿರ್ವಹಣೆ ಮಾಡದಿರುವ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಡಕುಂಟಾಗಿರುವ ಕುರಿತು ವಾಹನ ಸಂಚಾರಿಗಳಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿವೆ.
ಜನ್ನಾಪುರ-ವಣಗೂರು ರಾಜ್ಯ ಹೆದ್ದಾರಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಗುತ್ತಿಗೆದಾರ ಸುದರ್ಶನ್ ಮರು ಡಾಂಬರೀಕರಣ ಮಾಡಿದ್ದರು. ಸುಮಾರು 5 ಲಕ್ಷ ರೂ.ಗಳಲ್ಲಿ 5 ಕಿ.ಮೀ. ದೂರದ ರಸ್ತೆಯನ್ನು ವಿಸ್ತರಿಸಿ ಕಳಪೆ ಗುಣಮಟ್ಟದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಮಳೆ ಬೀಳುತಿದ್ದ ಸಮಯದಲ್ಲಿಯೇ ಡಾಂಬರು ಹಾಕಿದ ಸಮಯದಲ್ಲಿಯೇ ಡಾಂಬರು ಕಿತ್ತೆದ್ದು ಹೋಗಿತ್ತು. ಕಿರುಗುಂದ ವೃತ್ತದ ಬಳಿಯಿಂದ ಸ್ವಲ್ಪ ದೂರದಲ್ಲಿ ಮೋರಿ ಬಳಿ ರಸ್ತೆ ಮದ್ಯೆ ಹಲವು ಗುಂಡಿಗಳು ಬಿದ್ದಿವೆ. ಅಲ್ಲದೇ ಸೇತುವೆ ಬಳಿಯೂ ಗುಂಡಿಯಾಗಿದೆ.
ರಸ್ತೆ ಬದಿ ಹಾಗೂ 5 ಕಿ.ಮೀ.ಉದ್ದಗಲಕ್ಕೂ ಅಲ್ಲಲ್ಲಿ ಅನೇಕ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಈ ಬಗ್ಗೆ ಇತ್ತೀಚೆಗೆ ಕಿರುಗುಂದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಆರ್.ನಝೀರ್ ಜಿಲ್ಲಾಧಿಕಾರಿ ಜಿ.ಸತ್ಯವತಿಯವರಿಗೆ ವಾಟ್ಸಾಪ್ ಮೂಲಕ ರಸ್ತೆ ಗುಂಡಿಯ ಬಗ್ಗೆ ಮಾಹಿತಿ ನೀಡಿದ್ದರು. ಪಿಡಬ್ಲ್ಯೂಡಿ ಇಲಾಖೆ ಸುಪರ್ಧಿಯಲ್ಲಿ ನಡೆದಿರುವ ಈ ರಸ್ತೆಯ ಡಾಂಬರೀಕರಣವನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರು 3 ವರ್ಷಗಳ ವರೆಗೆ ನಿರ್ವಹಣೆ ಮಾಡಬೇಕು ಎನ್ನುವುದನ್ನು ಗಮನಕ್ಕೆ ತಂದಿದ್ದರು.