ರಾಮನಗರ: ನಗರದ ಹೊರವಲಯದ ರಾಜೀವ್ ಗಾಂಧಿಪುರದಲ್ಲಿ ನಿಸರ್ಗ ಬಿಂಬ ಫೌಂಡೇಷನ್ ಸಂಸ್ಥೆ ವತಿಯಿಂದ ನಡೆದ ನಾಡ ಪ್ರಭು ಕೆಂಪೇಗೌಡರವರ 508ನೇ ಜಯಂತೋತ್ಸವ ಹಾಗೂ ಮಕ್ಕಳ ಹಬ್ಬ-2017 ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರು ಎಲ್ಲಾ ಜನಾಂಗದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ದುಡಿದಂತಹ ಮಹಾ ಪುರುಷರಿಗೆ ಜಾತಿಯ ಬಣ್ಣವನ್ನು ಬಳಿಯದೇ ಅವರ ತತ್ವ ಸಿದ್ದಾಂತ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯದ ಜನಾಂಗದ ನಾಯಕರಾಗಿರಲಿಲ್ಲ. ಎಲ್ಲ್ಲ ಜನಾಂಗದ ಏಳಿಗೆಗಾಗಿ ಕೆಲಸ ಮಾಡಿದಂತಹ ಮಹಾನ್ ನಾಯಕರಾಗಿದ್ದಾರೆ ಎಂದರು. ಆದರೆ ಅವರನ್ನು ಒಂದು ಸಮುದಾಯದ ನಾಯಕನನ್ನಾಗಿ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ನಿರ್ಮಾತೃವಾಗಿ ರಾಜ್ಯಕ್ಕೆ ರಾಜಧಾನಿ ಕೊಡುಗೆ ನೀಡುವ ಮೂಲಕ ಕೆಂಪೇಗೌಡರು ವಿಶ್ವನಾಯಕರಾದರು, ಕೆರೆ-ಕಟ್ಟೆ, ಗುಡಿ-ಗೋಪುರಗಳನ್ನು ನಿರ್ಮಿಸಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಅವರ ಮುಂದಾಲೋಚನೆಯಿಂದಾಗಿ ಬೆಂಗಳೂರು ಇಂದು ವಿಶ್ವದಲ್ಲೇ ಉನ್ನತ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂನಾಗರಾಜು ಉದ್ಘಾಟಿಸಿದರು. ನಿಸರ್ಗ ಬಿಂಬ ಫೌಂಡೇಷನ್ ಸಂಸ್ಥೆ ಅಧ್ಯಕ್ಷ ಎಂ.ಡಿ.ಶಿವಕುಮಾರ್, ಕ.ಕ.ಜ.ವೇ ವಿಕಲಚೇತನ ಘಟಕದ ಅಧ್ಯಕ್ಷ ಮುನಿರಾಜುಗೌಡ, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ.ದಿನೇಶ್, ರಣಧೀರ ಪಡೆ ರಾಜ್ಯ ಉಪಾಧ್ಯಕ್ಷ ಗೋವಿಂದರಾಜು, ಯುವ ಮುಖಂಡರಾದ ಕನ್ನಡ ರಾಜು, ನವೀನ್.ಎಂ. ಲೋಹಿತ್, ವಿನಯ್, ನಾಗರತ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನಸೆಳೆಯಿತು.