ಯಳಂದೂರು: ಡಾ.ಬಿ.ಆರ್.ಅಂಬೇಡ್ಕರ್ ಬಿಂಬಿಗ್ರಾಹಿ ಮುಖವದನ, ಚಿಂತನಾ ಲಹರಿಯಲ್ಲಿ ಮೈಮರೆತ ಭೀಮಕಾಯ, ಲೌಕಿಕ ಬದುಕಿನಲ್ಲಿ ವಿಶ್ರಮಿಸಿದ ಭಾರತ ರತ್ನ, ಪುಸ್ತಕದ ಹಾಳೆಯಲ್ಲಿ ಅಚ್ಚೊತ್ತಿದ ಭಾವಲಹರಿ… ಇಂತಹ ಅಪರೂಪದ ದೃಶ್ಯ ಮಾಂಬಳ್ಳಿ ಗ್ರಾಮದ ಕಮಲಮ್ಮ ಕರಿಗೇಗೌಡ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಂಬಾಳೆ ಪ್ರತಿಭಾರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭೀಮ ಕಲಾಶಿಬಿರದ ಸಮಾರೋಪ ಸಮಾರಂಭದಲ್ಲಿ ಕಂಡು ಬಂದಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ ಅವರು ಕೌದಿಲ, ಕಿನ್ನಾಳ, ಬುಡಕಟ್ಟು ಜನಾಂಗಗಳಲ್ಲಿರುವ ದೇಸಿ ಕಲಾಪರಂಪರೆಯನ್ನು ಪೋಷಿಸುವ ಕೆಲಸವನ್ನು ಇಂದಿನ ಯುವಜನತೆ ಮಾಡುವ ಅಗತ್ಯವಿ. ಅಂಬೇಡ್ಕರ್ ಎಂದೂ ಕೂಡ ಯಶಸ್ಸನ್ನು ದುರ್ಬಳಕೆ ಮಾಡಿಕೊಂಡಿರಲ್ಲಿಲ್ಲ. ಈ ಮಾದರಿಯ ವ್ಯಕ್ತಿ ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿದೆ. ಸಿದ್ಧಾಂತಗಳನ್ನು ಮೀರಿ ಬದುಕುವ ಸಾಧನೆ ದೊಡ್ಡದು. ಜಾತಿ, ಧರ್ಮ, ಬಿಟ್ಟು ಮಾನವ ಪ್ರೀತಿಗೆ ಅಂಟಿಕೊಳ್ಳುವ ಪರಿಪಾಠದ ಅಗತ್ಯತೆ ಇಂದಿಗೆ ಅವಶ್ಯಕವಾಗಿದೆ. ಸರಳ ಬದುಕು ನಮ್ಮದಾಗಿಸಿಕೊಂಡು, ಸೃಜನಶೀಲತೆಯೊಂದಿಗೆ, ಎಲ್ಲ್ಲ ಧರ್ಮದ, ಜಾತಿಗಳ ಮಾನವೀಯ ಮೌಲ್ಯಗಳೊಂದಿಗೆ ತುಲನಾತ್ಮಕ ಜೀವನ ನಡೆಸುವ ಪರಿಪಾಠ ನಮ್ಮದಾಗಬೇಕು ಎಂದರು.
ಹಿರಿಯ ಕಲಾವಿದ ಬಾಬುರಾವ್ ನಡೋಣಿ ಮಾತನಾಡಿ, ಅಂಬೇಡ್ಕರ್ ಅವರ ಹಲವು ಮುಖಗಳನ್ನು ಚಿತ್ರಕಲೆಯಲ್ಲಿ ಕಾಣುವ ಕೆಲಸವನ್ನು ಹೊಂಬಾಳೆ ಸಂಸ್ಥೆ ಮಾಡಿದೆ. ಇದು ರಾಜ್ಯದಲ್ಲಿ ನಡೆದ ಭಿನ್ನ ಪ್ರಯತ್ನವಾಗಿದೆ ಎಂದರು. ಇದೇ ವೇಳೆ ರಾಜ್ಯ ಪ್ರಶಸ್ತಿ ವಿಜೇತ ಫಾಲ್ಗುಣ ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಯಶವಂತ ಹಿಬಾರೆ, ಡಾ. ಸುಭಾಷ ಕಮ್ಮಾರ, ಡಿ. ಮಹೇಂದ್ರ, ಡಿ.ಕೆ. ಕಾಮಕರ್, ಡಿಕೆ. ರಂಗನಾಥ್, ಮಂಜೇಗೌಡ, ಖಾಸಿಂ ಕನಸಾವಿ, ಬಸವರಾಜು ಕಮಾಜಿ, ದುಂಡು ಮಹದೇವಸ್ವಾಮಿ, ವಿ. ಅಂಜಲಿ, ಎಮ್.ಎನ್. ನರಸಿಂಹಮೂರ್ತಿ ಹೊಂಬಾಳೆ ಸಂಸ್ಥೆಯ ಕಾರ್ಯದರ್ಶಿ ಯಶವಂತರಾಜು ಸಮರ್ಪಣ ಸಂಸ್ಥೆಯ ಅಧ್ಯಕ್ಷ ನರೇಂದ್ರನಾಥ್ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.