ಮಾಗಡಿ: ತೀವ್ರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಮಾಗಡಿ ತಾಲೂಕಿನ ಹನ್ನೊಂದು ಗ್ರಾಮಗಳಿಗೆ ವೈಜಿ ಗುಡ್ಡ ಜಲಾಶಯದಿಂದ ನೀರನ್ನು ಬಿಡಲಾಗಿದೆ.
ಈ ಹಳ್ಳಿಗಳಿಗೆ ನೀರು ಒದಗಿಸುವ ಕಾಮಗಾರಿ ಆರಂಭವಾಗಿ ಎಂಟು ವರ್ಷಗಳು ಕಳೆದಿದ್ದರೂ ಇದುವರೆಗೆ ನೀರಿನ ಪೂರೈಕೆ ಆಗಿರಲಿಲ್ಲ. ಇದೀಗ ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡ ಹಿನ್ನಲೆಯಲ್ಲಿ ಕುಡಿಯಲು ಜಲಾಶಯದಿಂದ ನೀರನ್ನು ಹರಿಸಲಾಗಿದೆ. ಮೊದಲ ಹಂತವಾಗಿ ಚಕ್ರಬಾವಿ, ಮರಳುದೇವನಪುರ, ಹುಲಿಕಟ್ಟೆ, ಅಲಸಬೆಲೆ, ಹ್ಯಾಂಡ್ ಪೋಸ್ಟ್, ಬೈರನಹಳ್ಳಿ, ಕೋಂಡಹಳ್ಳಿ, ಅಗಲಕೋಟೆ, ಗಟ್ಟಿಪುರ, ಗೆಜ್ಜಗಾರಗುಪ್ಪೆ, ಸೀಗೆಕುಪ್ಪೆ, ಸಾದಮಾರನಹಳ್ಳಿ ಗ್ರಾಮಗಳಿಗೆ ಮೊದಲ ಹಂತವಾಗಿ ನೀರು ಬಿಡುಗಡೆ ಮಾಡಲಾಗಿದ್ದು ಜನ ಸಂತಸಗೊಂಡಿದ್ದಾರೆ.
ನೀರು ಹರಿಸುವ ಕಾರ್ಯಕ್ಕೆ ಶಾಸಕ ಬಾಲಕೃಷ್ಣ ಚಾಲನೆ ನೀಡಿ ಮಾತನಾಡಿ, ರಾಮನಗರ ತಾಲೂಕಿನ ಜಾಲಮಂಗಲಕ್ಕೂ ಈ ಜಲಾಶಯದ ನೀರನ್ನು ಕೊಡಲು ತೀರ್ಮಾನ ಕೈಗೊಳ್ಳಲಾಗಿದೆ, ಇದರ ಜೊತೆಗೆ ಮಾರ್ಕೋನಹಳ್ಳಿ ಡ್ಯಾಂ ನಿಂದ ಕುದೂರು, ತಿಪ್ಪಸಂದ್ರ, ಕಸಬಾ ಹೋಬಳಿಗಳಿಗೆ ನೀರು ಪೂರೈಕೆ ಮಾಡಲು ಸಚಿವರ ಜೊತೆ ಮಾತನಾಡಿದ್ದು ಅದನ್ನು ಕೂಡ ಅನುಮತಿ ಪಡೆಯಲಾಗುತ್ತದೆ ಎಂದರು.
ವೈಜಿ ಗುಡ್ಡ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಕೇವಲ 14 ಅಡಿಯಷ್ಟು ಮಾತ್ರ ಇದ್ದು, ಮುಂದೆ ಮಳೆಯಾದರೆ ಪ್ರಮಾಣ ಜಾಸ್ತಿಗೊಳ್ಳಬಹುದೇನೋ ಇಲ್ಲದಿದ್ದರೆ ನೀರಿನ ಬವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.