ಕುಶಾಲನಗರ: ಕೊಡಗಿನ ಕುಶಾಲನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಂದರ ಸಂತ ಸೆಬಾಸ್ಟಿಯನ್ನರ ಚರ್ಚ್ ಮೇ.1ರಂದು ಲೋಕಾರ್ಪಣೆಗೊಂಡಿದೆ.
ರೋಮನ್ ಕ್ಯಾಥೋಲಿಕ್ ಪಂಥಕ್ಕೆ ಸೇರಿದ ಈ ಚರ್ಚ್ ಪೋರ್ಚ್ ಗೀಸ್ ಮತ್ತು ಫ್ರೆಂಚ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಕೇರಳದ ಕೊಚ್ಚಿನ್ನ ಬೆನ್ನಿ ಎಂಬವರು ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಿದ್ದು, ಈ ಚರ್ಚ್ ನ ಆರಂಭಿಕ ಅಂದಾಜು ವೆಚ್ಚ 2.5 ಕೋಟಿಯಾಗಿತ್ತಾದರೂ ಅಂತಿಮವಾಗಿ ಒಟ್ಟು 3 ಕೋಟಿ ವೆಚ್ಚವಾಗಿದೆ. ಸ್ವಾಭಾವಿಕ ಬೆಟ್ಟದ ಮೇಲೆ 1.5 ಎಕರೆ ವಿಸ್ತೀರ್ಣ ನಿವೇಶನದ ಮೇಲೆ 7,500 ಚದರ ಅಡಿ ಒಳ ವಿನ್ಯಾಸದಲ್ಲಿ ಪ್ರಾರ್ಥನಾ ಮಂದಿರ ತಲೆ ಎತ್ತಿದೆ. ಬಾಲ್ಕನಿಯಲ್ಲಿ 100 ಮತ್ತು ಮುಖ್ಯ ಹಜಾರದಲ್ಲಿ ಒಟ್ಟು ಸಾವಿರ ಮಂದಿ ಒಮ್ಮೆಲೇ ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಚರ್ಚ್ ನ ತುತ್ತ ತುದಿಯಲ್ಲಿ 350 ಕೆ.ಜಿ. ತೂಕದ ಪಂಚಲೋಹದ ದೊಡ್ಡ ಗಾತ್ರದ ಘಂಟೆ ಅಳವಡಿಸಲಾಗಿದೆ. ಇದರ ಶಬ್ದ ಸುಮಾರು 2 ಕಿಲೋಮೀಟರ್ ದೂರಕ್ಕೆ ಕೇಳುತ್ತದೆ. ಮಂದಿರದ ಒಳಗೆ ತೇಗದ ಮರವನ್ನೇ ಯಥೇಚ್ಛವಾಗಿ ಬಳಸಲಾಗಿದೆ. ದೇವಾಲಯಗಳಲ್ಲಿ ಗರ್ಭಗುಡಿ ಇರುವಂತೆ ಈ ಚರ್ಚ್ ನಲ್ಲಿ ಚಿನ್ನ ಲೇಪಿತ 3 ಅಡಿ ಎತ್ತರ 2 ಅಡಿ ಸುತ್ತಳತೆ ಇರುವ ಪರಮ ಪ್ರಸಾದ ಪೆಟ್ಟಿಗೆ ಇಡಲಾಗಿದೆ. ಇದರ ಮೇಲೆ 10 ಅಡಿ ಎತ್ತರದ 5 ಅಡಿ ಅಗಲದ ತೇಗದ ಮರದ ಶಿಲುಬೆ, ಏಸುವಿನ ವಿಗ್ರಹ ಇದೆ. ಸಂತ ಜೋಸೆಫರ ವಿಗ್ರಹ, ಮಾತೆ ಮೇರಿಯ ವಿಗ್ರಹವನ್ನು ಕಾಣಬಹುದು. ಕೆತ್ತನೆ ಕೆಲಸಗಳನ್ನೆಲ್ಲಾ ಕೇರಳದ ತ್ರಿಶೂರ್ನಲ್ಲೇ ಪರಿಣಿತರಿಂದ ಮಾಡಿಸಿ ಇಲ್ಲಿಗೆ ತಂದು ಜೋಡಿಸಿರುವುದು ವಿಶೇಷವಾಗಿದೆ.
ಚರ್ಚ್ ನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರೂ.40 ಲಕ್ಷ ನೆರವು ನೀಡಿದ್ದು, ಲೋಕಸಭಾ ಸದಸ್ಯರು ಹಾಗೂ ಶಾಸಕರ ನಿಧಿಯಿಂದಲೂ ಆರ್ಥಿಕ ಸಹಾಯಧನ ಸಿಕ್ಕಿದೆ. ಅಲ್ಲದೆ ಚರ್ಚ್ ವ್ಯಾಪ್ತಿಯ 1200 ಭಕ್ತರಿಂದ ವಂತಿಗೆ ಸಂಗ್ರಹಿಸಲಾಗಿದೆ ಎಂದು ದೇವಾಲಯ ನಿರ್ಮಾಣ ಸಮಿತಿ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ಸ್ ತಿಳಿಸಿದ್ದಾರೆ.
ಚರ್ಚ್ ಒಳಗೆ ಪುರಾತನ ಕಾಲದ ರೀತಿಯ ದೀಪದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಬೇಕಾದ ದೀಪಗಳನ್ನು ಇಟಲಿಯಿಂದ ತರಿಸಲಾಗಿದೆ. ಪ್ರಾರ್ಥನಾ ಮಂದಿರಕ್ಕೆ ವೃದ್ಧರು, ಅಂಗವಿಕಲರು ಸುಲಭವಾಗಿ ಆಗಮಿಸಲು ರ್ಯಾಂಪ್ ವ್ಯವಸ್ಥೆ ಇದೆ. ಪಾರ್ಕಿಂಗ್ ಗಾಗಿ 2 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಚರ್ಚ್ ನ ತುತ್ತ ತುದಿಗೆ ಏರಿದರೆ ಸಂಪೂರ್ಣ ಕುಶಾಲನಗರದ ವಿಹಂಗಮ ನೋಟವನ್ನು ಕಾಣಬಹುದಾಗಿದೆ.
ಒಟ್ಟಾರೆ ಸುಂದರ ಮತ್ತು ವಿಭಿನ್ನವಾಗಿ ನಿರ್ಮಾಣಗೊಂಡಿರುವ ಚರ್ಚ್ ಕೊಡಗಿಗೊಂದು ಹೆಮ್ಮೆಯಾಗಿರುವುದಂತು ಸತ್ಯ,,,