ಸುಂಟಿಕೊಪ್ಪ: ಕೂಲಿ ಕೆಲಸ ನಿರ್ವಹಿಸಿ ಬರುತ್ತಿದ್ದು ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಸಂದರ್ಭ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಕಂಬಿಬಾಣೆ ತೋಟವೊಂದರಲ್ಲಿ ನಡೆದಿದೆ.
ಕಂಬಿಬಾಣೆ ನಿವಾಸಿ ತಮ್ಮಣ್ಣರಾವ್ (55) ಗಾಯಗೊಂಡ ದುರ್ದೈವಿ. ಸ್ಥಳೀಯ ಮುನ್ಸಿಪಾಲ್ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸಿ ಸಂಜೆ 4 ಗಂಟೆ ಸಮಯದಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಎತ್ತಡ್ಕ ತೋಟದಲ್ಲಿ ಬಿಡುಬಿಟ್ಟಿದ್ದ ಮರಿ ಹಾಗೂ ಕಾಡಾನೆಗಳ ಹಿಂಡನ್ನು ಕಾಡಿಗೆ ಹಿಮ್ಮಟ್ಟಿಸಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ ಕಾಡಾನೆಗಳು ತಮ್ಮಣ್ಣ ಅವರ ಮೇಲೆ ದಾಳಿ ನಡೆಸಿದ್ದು, ಇದನ್ನು ಕಂಡ ತಮ್ಮಣ್ಣ ಅವರು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಕಾಫಿ ತೋಟದೊಳಗೆ ಓಡಿದ ಸಂದರ್ಭದಲ್ಲಿ ಕಾಫಿ ಗಿಡಗಳು ತಗುಲಿ ತಲೆ ಭಾಗಕ್ಕೆ ಕೈ, ಕಾಲು ಹಾಗೂ ಸೊಂಟ ಭಾಗಕ್ಕೆ ತೀವ್ರ ತರಹದ ಗಾಯಗಳಾಗಿದ್ದು, ಅವರನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.