ಗುಂಡ್ಲುಪೇಟೆ: ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿಯ ಸ್ಟೇಟಸ್ನ್ನು ವಾಟ್ಸಪ್ ನಲ್ಲಿ ರವಾನಿಸಿದ ಆರೋಪದ ಮೇರೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಕನೊಬ್ಬನನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ ದಾರಿಬೇಗೂರಲ್ಲಿ ನಡೆದಿದೆ.
ದಾರಿಬೇಗೂರು ಶಾಲಾ ಶಿಕ್ಷಕ ರವಿ ವಾಟ್ಸಪ್ ಮೂಲಕ ಅವಹೇಳನಕಾರಿ ಸಂದೇಶ ಕಳುಹಿಸಿ ಅಮಾನತುಗೊಂಡವನು. ಈತ ಡಾ. ಬಿ.ಆರ್.ಅಂಬೇಡ್ಕರ್ ಗೆ ಅಪಮಾನವಾಗುವ ರೀತಿಯ ಸ್ಟೇಟಸ್ ಅನ್ನುವಾಟ್ಸಪ್ ಮೂಲಕ ರವಾನಿಸಿದ್ದನು. ಈ ಬಗ್ಗೆ ದಸಂಸ ಮುಖಂಡ ಸುಭಾಷ್ ಮಾಡ್ರಳ್ಳಿ ಎಂಬುವರು ಏ.29ರಂದು ಗುಂಡ್ಲುಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳ ಅವರು ಗುಂಡ್ಲುಪೇಟೆಕ್ಷೇತ್ರದ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಾಯಾಧಿಕಾರಿ ನಂದೀಶ್ ಅವರಿಂದ ಮಾಹಿತಿ ಪಡೆದು ಅದರ ಆಧಾರದ ಮೇಲೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ರವಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆಯಾದರೂ ಯುವ ಜನಾಂಗ ಸಾಮಾಜಿಕ ಜಾಲ ತಾಣವನ್ನು ಒಳಿತಿಗೆ, ಸದುದ್ದೇಶಕ್ಕೆ ಬಳಸುವ ಕೆಲಸಕ್ಕೆ ಬಳಸಲಿ ಅದು ಬಿಟ್ಟು ದುರುದ್ದೇಶಗಳಿಗೆ ಬಳಸಿ ಸಮಾಜದಲ್ಲಿ ಗೊಂದಲ ಸೃಷ್ಠಿಸುವುದನ್ನು ನಿಲ್ಲಿಸಲಿ.