ಮಂಡ್ಯ: ಮುಂದೆ ತೆರಳುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನ ಹಿಂಬದಿ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.
ಪಾಂಡವಪುರ ಪಟ್ಟಣದ ಚಿಕ್ಕಮಸೀದಿ ನಿವಾಸಿ ಲಕ್ಷ್ಮಣಶೆಟ್ಟಿ ಪುತ್ರ ಬಾಲಕೃಷ್ಣ(ಕಿಟ್ಟಿ) (41) ಮೃತ ಪಟ್ಟ ಸವಾರ. ಇನ್ನೊಬ್ಬ ಕೃಷ್ಣನಗರ ನಿವಾಸಿ ಲಕ್ಷ್ಮಣ (45) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಬಾಲಕೃಷ್ಣ ಮೂಲತಃ ಪಾತ್ರೆ ವ್ಯಾಪಾರಿಯಾಗಿದ್ದು, ಚಿಕ್ಕಮಸೀದಿ ಬೀದಿಯಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದರು. ಬುಧವಾರ ಸ್ನೇಹಿತ ಲಕ್ಷ್ಮಣ ಅವರೊಂದಿಗೆ ಸ್ಕೂಟರ್ ನಲ್ಲಿ ಮೈಸೂರಿಗೆ ತೆರಳುವ ವೇಳೆ ಪಟ್ಟಣದ ಫೈವ್ಲೈಟ್ ವೃತ್ತದಲ್ಲಿ ಮಹಾರಾಷ್ಟ್ರ ಮೂಲದ ಟ್ಯಾಂಕರ್ ನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನ ಹಿಂಭಾಗದಲ್ಲಿ ಕುಳಿತಿದ್ದ ಬಾಲಕೃಷ್ಣ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭ ಟ್ಯಾಂಕರ್ ಬಾಲಕೃಷ್ಣ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿದ್ದ ಲಕ್ಷ್ಮಣ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಲಾರಿ ಮತ್ತು ಚಾಲಕನನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.