ಮಡಿಕೇರಿ: ಸಿದ್ದಾಪುರ ಬಳಿಯ ದಿಡ್ಡಳ್ಳಿ ಹಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಅರಣ್ಯದಲ್ಲಿ ನಿವಾಸಿಗಳು ಏಕಾಏಕಿ ಗುಡಿಸಲನ್ನು ನಿರ್ಮಿಸಿದ್ದು, ಪರಿಣಾಮ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಅರಣ್ಯ ಇಲಾಖೆ ಗುಡಿಸಲು ತೆರವಿಗೆ ಮುಂದಾಗಿದೆ. ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಹೆಚ್ಚಿರುವ ಕಾರಣದಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಳೆದ ಆರು ತಿಂಗಳ ಹಿಂದೆ ಹೀಗೆಯೇ ಏಕಾಏಕಿ ಅರಣ್ಯ ಪ್ರವೇಶ ಮಾಡಿದ ನೂರಾರು ಮಂದಿ ಅಕ್ರಮವಾಗಿ ಗುಡಿಸಲು ನಿರ್ಮಿಸಿದ್ದರು. ಇದನ್ನು ಅರಣ್ಯ ಇಲಾಖೆ ತೆರವುಗೊಳಿಸಿತ್ತು. ಈ ವಿಚಾರ ಭಾರೀ ಚರ್ಚೆಗೊಳಗಾಗಿ ಹೋರಾಟ ನಡೆದು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಸುದ್ದಿಯಾಗಿ ಪರಿಣಮಿಸಿತ್ತು.
ಕಂದಾಯ ಸಚಿವರು ಕೆಲವು ದಿನಗಳ ಹಿಂದೆ ಬಂದು ಮಾತುಕತೆ ನಡೆಸಿ ಹೋಗಿದ್ದರಾದರೂ ಅದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮತ್ತೆ ಅಕ್ರಮ ಗುಡಿಸಲು ನಿರ್ಮಾಣಕ್ಕೆ ಆದಿವಾಸಿಗಳು ಮುಂದಾಗಿರುವುದು ಕಂಡು ಬಂದಿದೆ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ದಿಡ್ಡಳ್ಳಿಯ ನಿರಾಶ್ರಿತರಿಗೆ ಕಾನೂನಾತ್ಮಕವಾಗಿ ಜಾಗ ಗುರುತಿಸಿ ವಸತಿ ವ್ಯವಸ್ಥೆ ಮಾಡುತ್ತಿದ್ದರೂ ತಮಗೆ ದಿಡ್ಡಳ್ಳಿಯಲ್ಲೇ ನಿವೇಶನ ನೀಡಬೇಕೆಂದು ಪಟ್ಟು ಹಿಡಿದಿರುವ ಆದಿವಾಸಿಗಳು ತಮ್ಮ ಪರ ಹೋರಾಟ ನಡೆಸುತ್ತಿದ್ದ ಎ.ಕೆ.ಸುಬ್ಬಯ್ಯ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದು ಇದೀಗ ತಾವೇ ಅರಣ್ಯ ಪ್ರದೇಶದಲ್ಲಿ ಮತ್ತೆ ಆದಿವಾಸಿಗಳು ಸುಮಾರು 60 ಗುಡಿಸಲುಗಳನ್ನು ಅರಣ್ಯ ಪ್ರದೇಶದಲ್ಲಿ ಏಕಾಏಕಿ ನಿರ್ಮಾಣ ಮಾಡಿದ್ದು, ಆದಿವಾಸಿಗಳು ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಡಿಕೇರಿ ಡಿವೈಎಸ್ಪಿ ಛಬ್ಬಿ ಹಾಗೂ ಅರಣ್ಯ ಇಲಾಖೆಯ ವೀರಾಜಪೇಟೆ ವಲಯ ಉಪ ಸಂರಕ್ಷಣಾಧಿಕಾರಿ ಮರಿಯ ಕೃಷ್ಟರಾಜ್, ಎ.ಸಿ.ಎಫ್ ಶ್ರೀಪತಿ ಆದಿವಾಸಿಗಳ ಮನವೊಲಿಕೆಗೆ ಮುಂದಾಗಿದ್ದು, ಇದಕ್ಕೆ ಆದಿವಾಸಿಗಳು ಒಲಿಯುವ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಮತ್ತೆ ತೆರವು ಕಾರ್ಯಾಚರಣೆ ಅನಿವಾರ್ಯವಾಗಲಿದೆ. ಈ ಪ್ರದೇಶದಲ್ಲಿ ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ 80 ಕ್ಕೂ ಅಧಿಕ ಪೊಲೀಸರು ಹಾಗೂ 40ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೀಸಲು ಅರಣ್ಯದಲ್ಲಿ ಅಕ್ರಮ ಗುಡಿಸಲು ನಿರ್ಮಿಸಿಕೊಂಡಿರುವ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಹಾಗೂ ಅಕ್ರಮ ಪ್ರವೇಶ ಹಾಗೂ ಜೀವ ಬೆದರಿಕೆ ಒಡ್ಡಿರುವ ಆರೋಪದಡಿ ಅರಣ್ಯ ಅಧಿಕಾರಿಗಳು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಜೆ.ಕೆ ಅಪ್ಪಾಜಿ, ಜೆ.ಕೆ ಮುತ್ತಮ್ಮ, ಅಪ್ಪು, ಮುತ್ತ ಹಾಗೂ ಮಲ್ಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.