ಹಾಸನ: ಭೂಮಿ ಪ್ರತಿಷ್ಠಾನದಿಂದ ಹಾಸನ ತಾಲೂಕು ದೊಡ್ಡಕೊಂಡಗುಳ ಗ್ರಾಮದಲ್ಲಿ ಬರದ ವಿರುದ್ಧ ಆರಂಭಗೊಂಡಿರುವ ಜಲಾಂದೋಲನಕ್ಕೆ ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಹಾಸನ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಅವರು ಘೋಷಿಸಿದ್ದಾರೆ.
ದೊಡ್ಡಕೊಂಡಗುಳ ಗ್ರಾಮದಲ್ಲಿ ಕಲ್ಯಾಣಿಯಲ್ಲಿ ಹೂಳೆತ್ತುವ ಸಂದರ್ಭ ಹಣದ ಪ್ರಶ್ನೆ ಬಂದಾಗ ಅವರೇ ಒಂದು ತಿಂಗಳ ಸಂಬಳ ನೀಡುವುದಾಗಿ ಘೋಷಣೆ ಮಾಡಿದರು. ಅದಕ್ಕೆ ಜಲಾಂದೋಲನದ ಕಾರ್ಯಕರ್ತರು 15 ದಿನಗಳ ಸಂಬಳ ಸಾಕು ಎಂದು ಹೇಳಿದ್ದರು. ಉಪವಿಭಾಗಾಧಿಕಾರಿಗಳ ಮಾತಿನಿಂದ ಸ್ಪೂರ್ತಿಗೊಂಡ ಎಂಸಿಇ ಕಾಲೇಜಿನ ಪ್ರಾಧ್ಯಾಪಕ ನಿಡೂಡಿ ರಮೇಶ್ ಅವರು, ಗುದ್ದಲಿ, ಹಾರೆ, ಪಿಕಾಸಿ ಇನ್ನಿತರ ಸಲಕರಣೆಗಳಿಗೆ ತಗುಲಿದ ವೆಚ್ಚ 20,500 ರೂ.ಗಳನ್ನು ತಾವೇ ಪಾವತಿ ಮಾಡುವುದಾಗಿ ಘೋಷಣೆ ಮಾಡಿದರು.
ದೊಡ್ಡಕೊಂಡಗುಳ ಗ್ರಾಮಕ್ಕೆ ಬಂದ ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಅನಂತರಾಜ್ ಮತ್ತು ಪದಾಧಿಕಾರಿಗಳು ಜೆಸಿಬಿ ಕೆಲಸದ ಖರ್ಚಿಗೆ 10 ಸಾವಿರ ರೂ.ಕೊಟ್ಟರು. ಹಾಸನ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಅವರು ಆಂದೋಲನದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ತಾವೊಬ್ಬ ಉನ್ನತ ಅಧಿಕಾರಿ ಎಂಬುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಗುದ್ದಲಿ ಹಿಡಿದು ಹೂಳು ಬಗೆಯುವ ಕೆಲಸ ಮಾಡಿದರಲ್ಲದೆ, ಟ್ರ್ಯಾಕ್ಟರ್ ಏರಿ ಜನರನ್ನು ಹುರಿದುಂಬಿಸಿದರು. ಬುಧವಾರವೂ ಸಹ ಉಪವಿಭಾಗಾಧಿಕಾರಿ ನಾಗರಾಜ್ ಅವರು ಬೆಳ್ಳಂಬೆಳಗ್ಗೆ ಪ್ರಗತಿಪರ ಚಿಂತಕರು ಹಾಗೂ ಸಮಾಜ ಮುಖಿ ಯುವರೊಂದಿಗೆ ದೊಡ್ಡಕೊಂಡಗುಳ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಆಂದೋಲನಕ್ಕೆ ಬೆಂಬಲ ಕೋರಿದರು.
ಅಂಗಡಿಯೊಂದರಲ್ಲಿ ಗುಟ್ಕಾ,ಪಾನ್ಪರಾಗ್ ಮಾರಾಟ ಮಾಡುತ್ತಿರುವುದನ್ನು ಕಂಡ ಉಪವಿಭಾಗಾಧಿಕಾರಿ, ಗುಟ್ಕಾ, ಪಾನ್ಪರಾಗ್ ಮಾರುವುದು ಅಪರಾಧ. ಗುಟ್ಕಾ ಇನ್ನಿತರ ದುರಭ್ಯಾಸಗಳಿಗೆ ನಿವೃತ್ತಿ ವೇತನ ಮತ್ತು ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿಯನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ತಿಳಿ ಹೇಳಿದರಲ್ಲದೆ, ಇನ್ನು ಮುಂದೆ ಪಾನ್ಪರಾಗ್ ಮಾರಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಸಹ ಕೊಟ್ಟರು.
ಗ್ರಾಮದಲ್ಲಿನ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಯುವಕರು, ಮುಖ್ಯಸ್ಥರು ಮುಂದೆ ಬರುತ್ತಿದ್ದಾರೆ. ಗ್ರಾಮದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಭೂಮಿ ಪ್ರತಿಷ್ಠಾನದವರು ಚರ್ಚೆ ನಡೆಸಿದ್ದು, ಮುಂದಿನ ಮಳೆಗಾಲದ ಹೊತ್ತಿಗೆ ಗ್ರಾಮದ ಚಿತ್ರಣ ಬದಲಿಸುವ ಸಂಕಲ್ಪವನ್ನಿಟ್ಟುಕೊಂಡು ಮುನ್ನುಗ್ಗುತ್ತಿದ್ದಾರೆ.
ಮೇ.7ರ ಭಾನುವಾರ ಕಲ್ಯಾಣಿ ಒಳಗೆ ಬಾವಿ ನಿರ್ಮಿಸಲು ಹಾಗೂ ದೊಡ್ಡ ಕೊಂಡಗುಳ ಗ್ರಾಮದಲ್ಲಿ ಸ್ವಚ್ಛತಾ ಕೆಲಸಗಳಿಗೆ ಶ್ರಮದಾನ ಮಾಡಲು ಬೇರೆ-ಬೇರೆ ಸಂಘಟನೆಗಳ ಸ್ವಯಂ ಸೇವಕರು ಮತ್ತು ಗ್ರಾಮಸ್ಥರು ಸಹ ಬರಬೇಕು ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗಾಜ್ ಅವರು ಮನವಿ ಮಾಡಿದ್ದಾರೆ. ಇದಲ್ಲದೆ ಗ್ರಾಮದ ಶಾಲೆ ಹಾಗೂ ಕೆರೆ ಒತ್ತುವರಿ ತೆರವುಗೊಳಿಸಲಾಗಿದ್ದು ಶೀಘ್ರದಲ್ಲೇ ಅಲ್ಲೆಲ್ಲಾ ಸಸಿಗಳನ್ನು ನೆಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.